
ಬೆಂಗಳೂರು : ದಶಕದಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ನಾಡಿನ ಹಿತ ಕಾಪಾಡುವ ಉದ್ದೇಶದೊಂದಿಗೆ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಬರುವ ಲೋಕಸಭಾ ಚುನಾವಣೆ ಮುಗಿದ ನಂತರ ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಖುದ್ದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ರಕ್ಷಣಾ ವೇದಿಕೆಯಿಂದ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕು ಎಂಬ ಚಿಂತನೆ ಹೊಸದೇನಲ್ಲ. ಹಲವು ವರ್ಷಗಳಿಂದಲೂ ಈ ಬಗ್ಗೆ ಸಂಘಟನೆಯಲ್ಲಿ ಚರ್ಚೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿಯೇ ಕಳೆದ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆಯಲ್ಲಿ ಸಂಘಟನೆ ವತಿಯಿಂದಲೇ ಸುಮಾರು ಹತ್ತು ವಾರ್ಡ್‌ಗಳಲ್ಲಿ ಸ್ಪರ್ಧಿಸಲಾಗಿತ್ತು. ಜನರ ಪ್ರತಿಕ್ರಿಯೆ ತಿಳಿದುಕೊಳ್ಳುವುದಕ್ಕಾಗಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಎಲ್ಲ ಅಭ್ಯರ್ಥಿಗಳೂ ಸೋಲುಂಡರು. ನಂತರ ಪಕ್ಷ ಸ್ಥಾಪಿಸುವ ಯೋಚನೆ ನೆನೆಗುದಿಗೆ ಬಿದ್ದಿತ್ತು.
ಇದೀಗ ಕಳೆದ ಹಲವು ದಿನಗಳ ಹಿಂದೆ ನಡೆದ ವೇದಿಕೆಯ ರಾಜ್ಯ ಸಮಿತಿ ಸಭೆಯಲ್ಲಿ ಹಲವು ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರು ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದರು. ಮಹಾರಾಷ್ಟ್ರದಲ್ಲಿ ಅಲ್ಲಿನ ನಾಡು-ನುಡಿ ಕಾಪಾಡುವ ಉದ್ದೇಶದೊಂದಿಗೆ ಶಿವಸೇನೆ ಹೇಗೆ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಿದೆಯೋ ಅದೇ ರೀತಿ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕು ಎಂಬ ಅಭಿಪ್ರಾಯವನ್ನು ಹಲವು ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಭಾನುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಅನೇಕ ಕಡೆಗಳಿಂದ ಆಗ್ರಹ ಕೇಳಿಬರುತ್ತಿದೆ. ಸಂಘಟನೆಯ ಮುಂದಿನ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಪಕ್ಷ ಸ್ಥಾಪಿಸುವುದು ಸುಲಭವಲ್ಲ ಎಂಬುದೂ ಗೊತ್ತಿದೆ. ಅದಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ಸಂಪನ್ಮೂಲವೂ ಬೇಕು. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ ಲೋಕಸಭಾ ಚುನಾವಣೆ ನಂತರ ಪಕ್ಷ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ಆರಂಭವಾಗಿದೆ. ರಕ್ಷಣಾ ವೇದಿಕೆಯ ರಾಜ್ಯ ಪದಾಧಿಕಾರಿಗಳ ಮುಂದಿನ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ ಲೋಕಸಭಾ ಚುನಾವಣೆ ನಂತರ ಪಕ್ಷ ಸ್ಥಾಪಿಸುವ ಉದ್ದೇಶವಿದೆ
-ಟಿ.ಎ.ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.