ವಾಜಪೇಯಿ ನಂ.1 ಆದರ್ಶ ವ್ಯಕ್ತಿ: ಪರಮೇಶ್ವರ್

By Web DeskFirst Published Aug 27, 2018, 11:36 AM IST
Highlights

‘ಸಮಾನತೆ’ ಮತ್ತು ‘ಭಾತೃತ್ವ’ ಎಂಬ ಪದಗಳನ್ನು ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ನಡವಳಿಕೆ ಮತ್ತು ಆಡಳಿತ ವೈಖರಿಯಲ್ಲಿ ನೋಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು. ವಾಜಪೇಯಿ ಅವರು ಆದರ್ಶ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. 

ಬೆಂಗಳೂರು :  ವಾಜಪೇಯಿ ಅವರ ವ್ಯಕ್ತಿತ್ವವನ್ನು ವಿವರಿಸುವುದು ಸೂರ್ಯನನ್ನು ವಿಮರ್ಶಿಸಿದಂತೆ. ರಾಜಕೀಯ ಜೀವನದಲ್ಲಿ ಕೆಲವರನ್ನು ಮಾತ್ರ ಆದರ್ಶ ಎಂದು ಹೇಳಬಹುದಾಗಿದ್ದು, ಅವರುಗಳಲ್ಲಿ ವಾಜಪೇಯಿ ಮೊದಲಿಗರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದರು.

ಭಾನುವಾರ ನಗರದ ಪುರಭವನದಲ್ಲಿ ನಡೆದ ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಉಲ್ಲೇಖಿಸಿರುವ ‘ಸಮಾನತೆ’ ಮತ್ತು ‘ಭಾತೃತ್ವ’ ಎಂಬ ಪದಗಳನ್ನು ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ನಡವಳಿಕೆ ಮತ್ತು ಆಡಳಿತ ವೈಖರಿಯಲ್ಲಿ ನೋಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನನ್ನ ಕಾರ್ಯವೈಖರಿ ಕಂಡು ಬೆನ್ನುತಟ್ಟಿಪ್ರಶಂಸೆಯ ಮಾತುಗಳನ್ನಾಡಿದ್ದರು ಎಂದರು. ರಾಜಕಾರಣದಲ್ಲಿ ಆ ಪಕ್ಷ, ಈ ಪಕ್ಷ ಎಂಬ ಭಾವನೆ ಬರುವುದು ಸಾಮಾನ್ಯ. ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ತಕ್ಷಣ ಬರುತ್ತೇನೆ ಎಂದು ಹೇಳಿದ್ದೆ ಎಂದರು.

ವಾಜಪೇಯಿ ಅವರನ್ನು ದೂಷಣೆ ಮಾಡಿದವರು, ತೆಗಳಿದವರು ಇಲ್ಲವೇ ಇಲ್ಲ ಎಂಬುದು ನನ್ನ ಅಭಿಪ್ರಾಯ. ಅವರ ಜೀವನದ ಆದರ್ಶಗಳನ್ನು ಅನುಕರಣೆ ಮಾಡಿದಲ್ಲಿ ನಮ್ಮ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.ಭಾರತೀಯ ಎನ್ನಬೇಕಾದರೆ ಎಲ್ಲ ವರ್ಗದವರಿಗೂ ಶಾಶ್ವತ ವಿಳಾಸ ಇರಬೇಕು. ಎಲ್ಲರನ್ನೂ ಪಕ್ಕದಲ್ಲಿ ಕೂರಿಸಿಕೊಂಡು ಸಹೋದರರಂತೆ ಬಾಳಬೇಕು ಆಗ ಮಾತ್ರ ವಾಜಪೇಯಿಯವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದರು.

ರಾಜಕಾರಣಿಗಳಿಂದು ದೇಶದ ಅಭಿವೃದ್ಧಿಯ ಜೊತೆಗೆ ಕವಲು ದಾರಿಯಲ್ಲಿ ನಡೆಯುತ್ತಿದ್ದಾರೆ. ಒಬ್ಬರನ್ನೊಬ್ಬರು ತಿರಸ್ಕರಿಸುವ ಮನೋಭಾವಗಳು ಸೃಷ್ಟಿಯಾಗುತ್ತಿವೆ. ಸಮಾಜದಲ್ಲಿ ಬದುಕಬೇಕಾದರೆ ನಮ್ಮ ಪೂರ್ವಿಕರು ಬದುಕಿ ಬಾಳಿದ ಆದರ್ಶಗಳನ್ನು ಒಂದಿಷ್ಟುಅನುಸರಿಸಬೇಕು ಎಂದರು.

ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ದೇಶ. ಇಡೀ ವಿಶ್ವವೇ ಇಂದು ಭಾರತವನ್ನು ಗಮನಿಸುತ್ತಿದೆ. ದೇಶದ ಜೊತೆಗೆ ಸಮಾಜವೂ ಅಭಿವೃದ್ಧಿಯಾಗಬೇಕಾಗಿತ್ತು. ಆದರೆ, ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಇಂದಿಗೂ ಅಸಮಾನತೆ ಮುಂದುವರೆಯುತ್ತಿದ್ದು, ನಾಚಿಕೆಯ ಸಂಗತಿಯಾಗಿದೆ. ದೇಶದಲ್ಲಿ ಇಂತಹ ಪರಿಸ್ಥಿತಿ ಇರಬಾರದಾಗಿತ್ತು. ವಿಶ್ವದ ಯಾವ ದೇಶದಲ್ಲಿಯೂ ಈ ರೀತಿಯ ವ್ಯವಸ್ಥೆ ಇಲ್ಲ. ಎಲ್ಲ ವರ್ಗದವರಿಗೂ ಮುಕ್ತ ಮತ್ತು ಸಮಾನ ಅವಕಾಶಗಳಿವೆ. ಎಲ್ಲರಿಗೂ ಅಂತಹ ಸಮಾನ ಅವಕಾಶ ಕಲ್ಪಿಸಿದಾಗ ಮಾತ್ರ ನಿಜವಾದ ಭಾರತೀಯರಾಗಲು ಸಾಧ್ಯ ಎಂದರು.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಜೆಡಿಎಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯ, ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

click me!