ಖಾರದಪುಡಿ ಮಹೇಶ ಡೈರಿ ಮೇಲೆ ಮೋದಿ-ಸಹರಾ ಡೈರಿಯಿಂದ ವ್ಯತಿರಿಕ್ತ ಪರಿಣಾಮ

By Suvarna Web DeskFirst Published Feb 27, 2017, 5:43 PM IST
Highlights

ವಿಧಾನಪರಿಷತ್ಮಾಜಿಸದಸ್ಯಜನಾರ್ದನರೆಡ್ಡಿಅವರಜತೆನಿಕಟವಾಗಿಗುರುತಿಸಿಕೊಂಡಿದ್ದಖಾರದಪುಡಿಮಹೇಶಮತ್ತುಸಹಚರರುಪಡೆದಿದ್ದ 40 ಕೋಟಿ 92 ಲಕ್ಷರಿಸ್ಕ್ಅಮೌಂಟ್ಮತ್ತುಅದಿರುಸಾಗಿಸಲುಅಧಿಕಾರಿಗಳಿಗೆಸಂಭಾವನೆನೀಡಿದ್ದನ್ನುಆದಾಯತೆರಿಗೆಅಧಿಕಾರಿಗಳುದಾಳಿವೇಳೆಯಲ್ಲಿಪತ್ತೆಹಚ್ಚಿದ್ದರು.

ಬೆಂಗಳೂರು(ಫೆ.27): ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದ್ದ ಪ್ರಕರಣಗಳ ಮೇಲೆ ಸಹರಾ ಡೈರಿ ಪ್ರಕರಣ ಕುರಿತು ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪು ಈಗ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿ 25 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನಲಾದ ಪ್ರಕರಣವನ್ನು ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೈ ಬಿಟ್ಟಿರುವುದನ್ನೇ ನೆಪವಾಗಿರಿಸಿಕೊಂಡಿರುವ ಅಧಿಕಾರಿಗಳು ಖಾರದಪುಡಿ ಮಹೇಶ್​ ಮತ್ತು ಮನೋಜ್​ಕುಮಾರ್​ ವರ್ಮಾ ಎಂಬುವರಿಂದ ಹಣ ಸಂದಾಯವಾಗಿರುವ ಪ್ರಕರಣದ ಮಾನ್ಯತೆಯನ್ನು ಪ್ರಶ್ನಿಸಲಾರಂಭಿಸಿದ್ದಾರೆ.

ವಿಧಾನಪರಿಷತ್​ನ ಮಾಜಿ ಸದಸ್ಯ ಜನಾರ್ದನ ರೆಡ್ಡಿ ಅವರ ಜತೆ ನಿಕಟವಾಗಿ ಗುರುತಿಸಿಕೊಂಡಿದ್ದ ಖಾರದಪುಡಿ ಮಹೇಶ ಮತ್ತು ಸಹಚರರು ಪಡೆದಿದ್ದ 40 ಕೋಟಿ 92 ಲಕ್ಷ ರಿಸ್ಕ್​ ಅಮೌಂಟ್​ ಮತ್ತು ಅದಿರು ಸಾಗಿಸಲು ಅಧಿಕಾರಿಗಳಿಗೆ ಸಂಭಾವನೆ ನೀಡಿದ್ದನ್ನು ಆದಾಯ ತೆರಿಗೆ ಅಧಿಕಾರಿಗಳು ದಾಳಿ ವೇಳೆಯಲ್ಲಿ ಪತ್ತೆ ಹಚ್ಚಿದ್ದರು. ಅದೇ ರೀತಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಮಧುಶ್ರೀ ಎಂಟರ್​ಪ್ರೈಸೆಸ್​​ನ ಮ್ಯಾನೇಜಿಂಗ್​ ಪಾರ್ಟನರ್​ ಮಧುಕುಮಾರ್ ವರ್ಮಾ ಎಂಬಾತ ಪ್ರತಿಷ್ಠಿತ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ  ಹಲವರಿಗೆ ಹಣ ಸಂದಾಯ ಮಾಡಿದ್ದನ್ನು ಡೈರಿಯಲ್ಲಿ ನಮೂದಿಸಿದ್ದ. ಇದನ್ನು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಅಧಿಕಾರಿಗಳು ಬೆಳಕಿಗೆ ತಂದಿದ್ದರು.

ಖಾರದಪುಡಿ ಮಹೇಶ್ಪೆನ್ಡ್ರೈವ್ನಲ್ಲೇನಿತ್ತು?

ರಿಸ್ಕ್​ ಅಮೌಂಟ್ ಹೆಸರಿನಲ್ಲಿ 382 ಕಂಪನಿಗಳಿಂದ 40 ಕೋಟಿ 92 ಲಕ್ಷ ಮತ್ತು 617 ಅಧಿಕಾರಿ, ನೌಕರರಿಗೆ 2 ಕೋಟಿ 46 ಲಕ್ಷ ಲಂಚ ಪಡೆದಿದ್ದ ಎಂಬ ಮಾಹಿತಿ ಪೆನ್​ ಡ್ರೈವ್​ನಲ್ಲಿತ್ತು.ಈ ಮೊತ್ತವನ್ನು 60 ಬ್ಯಾಂಕ್​ ಖಾತೆಗಳ ಮೂಲಕ ಮತ್ತು ಕ್ಯಾಷ್​ ರೂಪದಲ್ಲೂ ಪಾವತಿ ಮಾಡಿದ್ದನ್ನು  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೆನ್​ ಡ್ರೈವ್​ ಆಧರಿಸಿ ವರದಿ ನೀಡಿದ್ದರು. ಖಾರದಪುಡಿ ಮಹೇಶ್ ಲಂಚ ಪ್ರಕರಣದಲ್ಲಿ ಅಧಿಕಾರಿ, ನೌಕರರ ವಿರುದ್ಧ 4 ವರ್ಷಗಳಾದರೂ ಅಧಿಕಾರಿಗಳು ಇವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸದಿರುವುದು ತಿಳಿದು ಬಂದಿದೆ.

ಮಧುಕುಮಾರ್ವರ್ಮಾ ಡೈರಿ ಕಥೆ ಏನು?

ಮಧುಶ್ರೀ ಎಂಟರ್​ ಪ್ರೈಸೆಸ್​​ನ ಮ್ಯಾನೇಜಿಂಗ್​ ಪಾರ್ಟನರ್​  ಮಧುಕುಮಾರ್ ವರ್ಮಾ ಎಂಬಾತ ಹಲವು ಗಣ್ಯರಿಗೆ ಹಣ ಪಾವತಿಸಿದ್ದನ್ನು ದಾಖಲೆಗಳಿಂದ ಗೊತ್ತಾಗಿತ್ತು. ಇದರಲ್ಲಿ ದೆಹಲಿ ಖರ್ಚುಗಳೂ, ಸಂಕೇತಗಳ ರೂಪದಲ್ಲಿ ನಮೂದಿಸಿದ್ದ ಕೆಲವು ಹೆಸರುಗಳು ಪ್ರತಿಷ್ಠಿತ ಮಾಧ್ಯಮ ಪ್ರತಿನಿಧಿಗಳತ್ತ ಬೊಟ್ಟು ಮಾಡಿ ತೋರಿಸಿತ್ತು. ಹೋಟೆಲ್​ ಖರ್ಚುಗಳು, ಮದ್ಯಪಾನ, ಚಪ್ಪಲಿ ಖರೀದಿ, ಮಾಧ್ಯಮ ಪ್ರತಿನಿಧಿಯ ಮಗನ ಮದುವೆ ಖರ್ಚು, ಊಟ, ವಸತಿ ಖರ್ಚುನ್ನು ಮಧುಕುಮಾರ್​ ವರ್ಮಾ ಪಾವತಿಸಿದ್ದನ್ನು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಲೋಕಾಯುಕ್ತರಾಗಿದ್ದ ಸಂತೋಷ್​ ಹೆಗ್ಡೆ 2011ರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ್ದ ವರದಿಯಲ್ಲಿನ ಈ ಅಂಶಗಳನ್ನೂ ಲೋಕಾಯುಕ್ತ ವರದಿಯ ಅಧ್ಯಾಯ 28ರಲ್ಲಿ ಸೇರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ವರದಿ ಸಲ್ಲಿಕೆಯಾಗಿ 6 ವರ್ಷಗಳಾದರೂ ಸರ್ಕಾರ ಈ ಪ್ರಕರಣಗಳ ಕುರಿತು ಯಾವುದೇ ಕ್ರಮ ವಹಿಸಲಿಲ್ಲ. ಅಕ್ರಮವಾಗಿ ಸಂಭಾವನೆ ನೀಡಿರುವುದು ಮತ್ತು ಗಣ್ಯಾತಿಗಣ್ಯರಿಗೆ ಪಾವತಿಸಿರುವ ಮೊತ್ತದ ಕುರಿತು ಆದಾಯ ತೆರಿಗೆ ಅಧಿಕಾರಿಗಳು ಸಂಬಂಧಿತ ವ್ಯಕ್ತಿಗಳ ವೈಯಕ್ತಿಕ ಖಾತೆಗಳನ್ನು ತನಿಖೆಗೆ ಒಳಪಡಿಸಲಿಲ್ಲ. ಅಲ್ಲದೆ, ಆರೋಪಿಗಳಿಂದ ಸಂದಾಯ ಮಾಡಿಸಿಕೊಂಡಿರುವ ವ್ಯಕ್ತಿಗಳು ಅಧಿಕಾರೇತರ ವ್ಯಕ್ತಿಗಳಾಗಿರುವ ಕಾರಣ ಅವರನ್ನು ಪ್ರಶ್ನಿಸುವ ಗೋಜಿಗೂ ಅಧಿಕಾರಿಗಳು ಹೋಗಲಿಲ್ಲ.

ಈ ಪ್ರಕರಣದ ಕುರಿತು ಇದುವರೆಗೂ ಗಮನ ಹರಿಸದ ಅಧಿಕಾರಿಗಳು ಸಹರಾ ಡೈರಿಯ ಕುರಿತು ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪು ಪ್ರಕಟವಾದ ನಂತರದ ದಿನಗಳಲ್ಲಿ ಖಾರದಪುಡಿ ಮಹೇಶ್​ ಮತ್ತು ಮಧುಕುಮಾರ್​ ವರ್ಮಾನ ಡೈರಿಯತ್ತ ಕಣ್ಣಾಡಿಸುತ್ತಿದ್ದಾರೆ. ಇದೇ ತೀರ್ಪುನ್ನೇ ನೆಪವಾಗಿರಿಸಿಕೊಂಡು ಖಾರದಪುಡಿ ಮಹೇಶ್​, ಮಧುಕುಮಾರ್​ ವರ್ಮಾ ಡೈರಿಗೂ ಯಾವುದೇ ಮಾನ್ಯತೆ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ಸುವರ್ಣ ನ್ಯೂಸ್​ಗೆ ತಿಳಿಸಿವೆ.

ವರದಿ: ಜಿ.ಮಹಾಂತೇಶ್​, ಸುವರ್ಣ ನ್ಯೂಸ್

click me!