ಮೋದಿ ಸರ್ಕಾರದಿಂದ ಶಾಲಾ ಕಾಲೇಜು ಮಕ್ಕಳಿಗೆ ಉಚಿತ ಬ್ಯಾಗ್!

First Published Jul 10, 2018, 1:17 PM IST
Highlights
  • ಜುಲೈ 15ರೊಳಗಾಗಿ ಈ ಕೆಳಗಿನ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಸಿ ಎಂಬ ಸಂದೇಶ
  • ವಾಸ್ತವದಲ್ಲಿ ಈ ರೀತಿಯ ಯಾವುದೇ ಯೋಜನೆ ಇಲ್ಲ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಉಚಿತ ಲ್ಯಾಪ್‌ಟಾಪ್ ನೀಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದೀಗ ಇಂಥದ್ದೇ ಮತ್ತೊಂದು ಸುದ್ದಿ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿ 'ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನರೇಂದ್ರ ಮೋದಿ ಸರ್ಕಾರ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸುತ್ತಿದೆ. ಪ್ರತಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದು ಉಚಿತ ಬ್ಯಾಗ್ ಪಡೆಯಬಹುದು’ ಎಂದು
ಹೇಳಲಾಗುತ್ತಿದೆ. 

ಹಾಗೆಯೇ 'ನಿಮ್ಮ ಬ್ಯಾಗ್ ಪಡೆಯಲು ಇದೇ ಜುಲೈ 15ರೊಳಗಾಗಿ ಈ ಕೆಳಗಿನ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಸಿ. ದಯವಿಟ್ಟು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಲುಪುವವರೆಗೆ ಈ ಸಂದೇಶವನ್ನು ಶೇರ್ ಮಾಡಿ' ಎಂದೂ ಕೂಡ ಹೇಳಲಾಗಿದೆ. ಈ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ಪುಟವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ವಿದ್ಯಾರ್ಥಿ ಹೆಸರು ಹಾಗೂ ಪೋಷಕರ ಹೆಸರನ್ನು ಭರ್ತಿ ಮಾಡುವಂತೆ ಹೇಳಲಾಗುತ್ತದೆ. ಹೀಗೆ ಭರ್ತಿ ಮಾಡಿದ ಬಳಿಕ ಈ ಸಂದೇಶವನ್ನು ಕನಿಷ್ಠ 10 ಜನರಿಗೆ ಕಳುಹಿಸುವಂತೆ ಸೂಚಿಸುತ್ತದೆ. 

ಆದರೆ ನಿಜಕ್ಕೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ನೀಡುತ್ತಿದೆಯೇ ಎಂದರೆ ಉತ್ತರ 'ಇಲ್ಲ'. ಮೋದಿ ಸರ್ಕಾರ ಈ ರೀತಿಯ ಯಾವುದೇ ಯೋಜನೆ ಜಾರಿ ಮಾಡಿಲ್ಲ. ಇಲ್ಲಿರುವ ವೆಬ್‌ಸೈಟ್ ಅಧಿಕೃತ ವೆಬ್‌ಸೈಟ್ ಅಲ್ಲ. ಈ ವೆಬ್‌ಸೈಟ್ ಮಾಲೀಕರು ಜಾಹಿರಾತುಗಳಿಂದ ಹಣಪಡೆಯುತ್ತಾರೆ. ಇದರಿಂದ ಯಾವುದೇ ಉಚಿತ ಬ್ಯಾಗ್ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ.

(ಕನ್ನಡಪ್ರಭ : ವೈರಲ್ ಚೆಕ್ ಅಂಕಣ)

click me!