
ಬೆಂಗಳೂರು [ಆ.11] : ಈಕೆ ಕಡಲೆಕಾಯಿ ವ್ಯಾಪಾರಿ ಚಂದ್ರಕಲಾ. ಚಿಕ್ಕವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಮಗಳನ್ನು ಸಾಕುವ ಜವಾಬ್ದಾರಿ ಹೊತ್ತಿರುವ ಇವರು ವ್ಯಾಪಾರ ಮಾಡಿ ಕೂಡಿಟ್ಟ ಹಣದಲ್ಲೇ ಪ್ರವಾಹ ಸಂತ್ರಸ್ತರಿಗಾಗಿ ಒಂದಷ್ಟು ಬ್ಲಾಂಕೆಟ್ಸ್, ಟವಲ್‌ಗಳನ್ನು ತಂದುಕೊಟ್ಟರು. ಇನ್ನೊಬ್ಬ ವಿದ್ಯಾರ್ಥಿ ರೋಜ್ ಗಾರ್ಡನ್‌ನ ಜಾನ್ ಬೆನಡಿಕ್ಟ್ . ತನ್ನ ಪೋಷಕರು, ಸಂಬಂಧಿಕರು ನೀಡಿದ ಚಿಲ್ಲರೆ ಕಾಸಿಂದ ಕೂಡಿಟ್ಟ110 ರು. ಹಣದಲ್ಲಿ ಬಿಸ್ಕೆಟ್ಸ್, ಸ್ನಾಕ್ಸ್ ತಂದುಕೊಟ್ಟ. ಮತ್ತೊಬ್ಬರು ರಾಜಾಜಿನಗರದ ಉದ್ಯಮಿ ಓಂಕಾರ್ ಮೂರ್ತಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ನೀಡಿ ನೆರವಾದರು.
ಪ್ರವಾಹ ಸಂತ್ರಸ್ತರ ನೆರವಿಗಾಗಿ ‘ಕನ್ನಡಪ್ರಭ-ಸುವರ್ಣ ನ್ಯೂಸ್’ ಕೈಗೊಂಡಿರುವ ‘ಉತ್ತರದೊಂದಿಗೆ ಕರುನಾಡು’ ಅಭಿಯಾನಕ್ಕೆ ಕರುನಾಡಿನ ಮಾನವೀಯ ಹೃದಯಗಳು ಸ್ಪಂದಿಸಿದ ರೀತಿಯಿದು. ಪ್ರವಾಹ ಪೀಡಿತರ ಸಂಕಷ್ಟನಿವಾರಣೆಗೆ ಲಕ್ಷ, ಕೋಟಿಗಟ್ಟಲೆ ಹಣ ನೀಡಲಾಗದಿದ್ದರೂ ಅವರ ಕಣ್ಣೀರೊರೆಸಲು ತಮ್ಮಿಂದ ಆದ ಅಳಿಲು ಸೇವೆಗೆ ಮುಂದಾದ ನೂರಾರು ಶ್ರೀಸಾಮಾನ್ಯರು ಕನ್ನಡಪ್ರಭ ಕಚೇರಿ ಮುಂದೆ ಶನಿವಾರವೂ ನೆರೆದಿದ್ದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಟೋ ಓಡಿಸಿ ಜೀವನ ಸಾಗಿಸುವ ಸದಾಶಿವ ತಮ್ಮ ದುಡಿಮೆಯಿಂದ ಒಂದಷ್ಟುಉಳಿಸಿ ಕೊಡೆ, ಬೆಡ್‌ಶೀಟ್‌ಗಳನ್ನು ತಂದುಕೊಟ್ಟರು. ಮಲ್ಲೇಶ್ವರದ ಕ್ಯಾಡ್ ಸೆಂಟರ್ ವ್ಯವಸ್ಥಾಪಕ ಸುಧೀಂದ್ರ ರೆಡ್ಡಿ ತಮ್ಮ ಸಿಬ್ಬಂದಿ ಜತೆ ಸೇರಿ ಸಾವಿರಾರು ರು.ಗಳ ಬ್ಲಾಂಕೆಟ್ ಮತ್ತಿತರ ಪರಿಹಾರ ಸಾಮಗ್ರಿಗಳನ್ನು ತಂದು ತಾವೇ ಟ್ರಕ್‌ಗಳಿಗೆ ಲೋಡ್ ಮಾಡಿದರು. ಚಾಮರಾಜಪೇಟೆಯ ವಿಜಯ್‌ಕುಮಾರ್ ಮತ್ತಿತರರು ಕೆಲ ಚೀಲ ಪಶು ಆಹಾರ ತಂದುಕೊಟ್ಟು ಸಾರ್ಥಕತೆಯ ನಿಟ್ಟುಸಿರು ಬಿಟ್ಟರು.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಪರಿಹಾರ ಸಾಮಗ್ರಿಗಳನ್ನು ತಂದು ಕೊಡುತ್ತಿದ್ದಾರೆ. ಕಾರ್ಮಿಕರಿಂದ ಮಾಲಿಕರವರೆಗೆ, ಮಕ್ಕಳಿಂದ ವಯಸ್ಸಾದವರವರೆಗೂ ಎಲ್ಲ ವರ್ಗದ ಜನ ಸಂತ್ರಸ್ತರ ನೆರವಿಗಾಗಿ ನಮ್ಮ ಅಭಿಯಾನದಲ್ಲಿ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ. ಕೆಲವರು ಖುದ್ದು ಹೊತ್ತು ತಂದರೆ, ಸಾಕಷ್ಟುಜನ ಕಾರುಗಳಲ್ಲಿ, ಆಟೋಗಳಲ್ಲಿ, ಬೈಕ್‌ಗಳಲ್ಲಿ ಸಾಮಗ್ರಿಗಳನ್ನು ತಂದು ನೀಡಿದ್ದಾರೆ.
ಕಬ್ಬನ್‌ಪೇಟೆ ಗೆಳೆಯರ ನೆರವು: ಕಬ್ಬನ್ ಪೇಟೆ ವ್ಯಾಪಾರಿಗಳ ಸಂಘದ ಆರ್.ಪ್ರಕಾಶ್, ಜಗದೀಶ್, ಜ್ಞಾನೇಶ್, ಮುಕುಂದ ಮತ್ತಿತರರು ಸಾವಿರಾರು ರು.ಗಳ ಮೌಲ್ಯದ ಕೊಡೆ, ಬ್ಲಾಂಕೆಟ್‌ಗಳನ್ನು ತಂದು ಸಂತ್ರಸ್ತರ ನೆರವಿಗೆ ನೀಡಿದರು.
ನಾಡಿನ ಜನರ ಉದಾರ ನೆರವಿನಿಂದಾಗಿ ಬೆಂಗಳೂರಿನ ಕನ್ನಡಪ್ರಭ-ಸುವರ್ಣ ನ್ಯೂಸ್ ಕಚೇರಿ ಹಾಗೂ ಇತರೆ ಕೆಲ ಜಿಲ್ಲಾ ಕಚೇರಿಗಳಿಗೆ ಕಳೆದ ಮೂರು ದಿನಗಳಿಂದ ಬಂದಿದ್ದು ಬರೋಬ್ಬರಿ 20 ಟ್ರಕ್‌ಗಳಿಗೂ ಮಿಗಿಲಾದಷ್ಟು ಪರಿಹಾರ ಸಾಮಗ್ರಿ. ಜನರು ನೀಡಿದ ಎಲ್ಲ ಪರಿಹಾರ ಸಾಮಗ್ರಿಗಳನ್ನೂ ನಮ್ಮ ನೂರಾರು ಸಿಬ್ಬಂದಿ ಹಾಗೂ ಕೆಲ ಸ್ವಯಂ ಸೇವಕರು ಜತೆಗೂಡಿ ಶನಿವಾರ ರಾತ್ರಿವರೆಗೆ ಒಟ್ಟು 19 ಟ್ರಕ್ಕುಗಳಲ್ಲಿ ತುಂಬಿ ನೆರೆಪೀಡಿತ ಪ್ರದೇಶಗಳ ಜನರ ನೆರವಿಗೆ ಕಳುಹಿಸಿಕೊಟ್ಟಿದ್ದಾರೆ.
ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಎಲ್ಲ ರೀತಿಯ ಆಹಾರ ಪದಾರ್ಥಗಳು, ಟೂತ್‌ಪೇಸ್ಟ್, ಬ್ರಶ್, ಚಾಪೆ, ಬ್ಲಾಂಕೆಟ್ಸ್‌ನಂತಹ ದಿನಬಳಕೆ ವಸ್ತುಗಳು, ಬಿಸ್ಕೆಟ್ಸ್, ಸ್ನಾಕ್ಸ್, ಜ್ಯೂಸ್ ಪ್ಯಾಕೆಟ್‌ಗಳು ಸೇರಿದಂತೆ ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ರೀತಿಯ ನೆರವನ್ನೂ ಜನರು ನೀಡುತ್ತಿದ್ದಾರೆ. ಸಾರ್ವನಿಕರಿಂದ ನೆರವು ದಿನೇ ದಿನೇ ಹೆಚ್ಚಾಗುತ್ತಿದ್ದು, ಅಭಿಯಾನದ ಮೊದಲ ಎರಡು ದಿನ ಗುರುವಾರ ಮತ್ತು ಶುಕ್ರವಾರ ನಮ್ಮ ಕಚೇರಿಗೆ 6 ಟ್ರಕ್‌ಗಳಷ್ಟುಪರಿಹಾರ ಸಾಮಗ್ರಿಗಳು ಬಂದರೆ, ಶನಿವಾರ ಒಂದೇ ದಿನ ಇನ್ನೂ 6 ಟ್ರಕ್‌ಗಳಷ್ಟುಸಾಮಗ್ರಿಗಳು ಬಂದಿದ್ದು, ಅಂದಂದಿನ ಸಾಮಗ್ರಿಗಳನ್ನು ಅಂದೇ ಟ್ರಕ್‌ಗಳ ಮೂಲಕ ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳ ಜನರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಬೆಂಗಳೂರಿನ ಕೇಂದ್ರ ಕಚೇರಿ ಅಲ್ಲದೆ, ಬೀದರ್, ಕಲಬುರಗಿ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಮೈಸೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಂದಲೂ ತಲಾ ಒಂದೊಂದರಂತೆ ಒಟ್ಟು ಏಳು ಟ್ರಕ್‌ಗಳಷ್ಟುಪರಿಹಾರ ಸಾಮಗ್ರಿಗಳು ಸಂಗ್ರಹವಾಗಿದ್ದು, ಸ್ಥಳೀಯರ ನೆರವಿನಿಂದ ಸಂತ್ರಸ್ತರಿಗೆ ಕಳುಹಿಸಿಕೊಡಲಾಗಿದೆ.
ಟ್ರಕ್ ನೀಡಿ ನೆರವಾದವರು : ಜನರು ನೀಡಿದ ಪರಿಹಾರ ಸಾಮಗ್ರಿಗಳನ್ನು ಪ್ರವಾಹಪೀಡಿತ ಸ್ಥಳಗಳಿಗೆ ತಲುಪಿಸಲು ಅಗತ್ಯ ಟ್ರಕ್‌ಗಳ ವ್ಯವಸ್ಥೆಯನ್ನು ಕರ್ನಾಟಕ ಕಾರ್ಮಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಆರ್‌ಟಿಐ ಕಾರ್ಯಕರ್ತ ಮರಿಲಿಂಗೇಗೌಡ, ಮಾಜಿ ಉಪ ಮೇಯರ್ ಹರೀಶ್, ಸಂಸದ ತೇಜಸ್ವಿ ಸೂರ್ಯ, ಖ್ಯಾತ ನಟ ಕಿಚ್ಚ ಸುದೀಪ್, ಯುವ ಮುಖಂಡ ಅರುಣ್ ವಿ. ಸೋಮಣ್ಣ, ವಕೀಲ ದೇವರಾಜೇಗೌಡ, ಪೆಟ್ರೋಲ್ ಬಂಕ್ ಶಿವಣ್ಣ, ಹೆಸರು ಹೇಳಲಿಚ್ಛಿಸದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಮತ್ತಿತರರು ನೀಡಿ ನೆರವಾಗಿದ್ದಾರೆ.
ವಿವಿಧ ಕಂಪನಿಗಳ ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಅಂಕಿತಾ, ಬಸವರಾಜು, ಉದ್ಯಮಿ ಶಿವರಾಜ್ ಅರಸ್, ಖಾಸಗಿ ಸಂಸ್ಥೆ ಉದ್ಯೋಗಿ ವೇದಶ್ರೀ, ವಿದ್ಯಾರ್ಥಿಗಳಾದ ರೋಹಿತ್, ಚಿರಂತ್ ಸೇರಿದಂತೆ ಅನೇಕ ಸ್ವಯಂಸೇವಕರು ನಮ್ಮ ಸಿಬ್ಬಂದಿ ಜತೆಗೂಡಿ ಜನರು ತಂದು ಕೊಟ್ಟಪರಿಹಾರ ಸಾಮಗ್ರಿಗಳನ್ನು ದಿನವಿಡೀ ಟ್ರಕ್‌ಗಳಿಗೆ ಲೋಡ್ ಮಾಡಿ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.