
ಸಾಗರ(ಅ.30): ಕಳಪೆ ಬಿತ್ತನೆಬೀಜ ಪೂರೈಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆವಿನಹಳ್ಳಿ ಹೋಬಳಿಯಲ್ಲಿ ಕಳಪೆ ಬಿತ್ತನೆ ಬೀಜ ಪೂರೈಕೆಯಾಗಿ ಬೆಳೆನಷ್ಟ ಉಂಟಾಗಿರುವ ಬಗ್ಗೆ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿಷಯ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಕಾಗೋಡು, ವಿದ್ಯಾವಂತರು ಗದ್ದೆ ಕಡೆ ಹೋಗುತ್ತಿಲ್ಲ. ಆಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ಬಂದಿರುವುದರಿಂದ ಅದನ್ನು ಬಳಸಿಕೊಂಡು ಯುವಜನರನ್ನು ಕೃಷಿಕ್ಷೇತ್ರದತ್ತ ಸೆಳೆಯುವ ಕೆಲಸವನ್ನು ಕೃಷಿ ಇಲಾಖೆ ಮಾಡಬೇಕಾಗಿದೆ. ರೈತರು ಮಣ್ಣು ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಸಾಗರ ತಾಲೂಕಿನಲ್ಲಿಯೇ ಮಣ್ಣು ಪ್ರಯೋಗಾಲಯ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀವು ಜಿಲ್ಲೆಯಲ್ಲಿ ಇರುವಾಗ ಸಕ್ರಿಯವಾಗಿರುವ ಅಧಿಕಾರಿಗಳು ನೀವು ಹೋದ ತಕ್ಷಣ ನಿಷ್ಕ್ರಿಯರಾಗಿ ಬಿಡುತ್ತಾರೆ. ಇದರಿಂದ ಆಡಳಿತ ಯಂತ್ರ ಕುಸಿದುಹೋಗಿದೆ. ರಾಜ್ಯ ಉಚ್ಚ ನ್ಯಾಯಾಲಯ ನಿಷ್ಕ್ರಿಯ ಅಧಿಕಾರಿಗಳನ್ನು ತೆಗೆದು ಹಾಕಿ ಎಂದು ಛೀಮಾರಿ ಸಹ ಹಾಕಿದೆ. ಆ ಕೆಲಸ ನಮ್ಮ ಜಿಲ್ಲೆಯಿಂದಲೆ ಪ್ರಾರಂಭವಾಗಬೇಕು ಎಂದು ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಒತ್ತಾಯಿಸಿದರು.
ಜಿಪಂ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಜಿಪಂ ಸಿಇಒ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕುಡಿವ ನೀರಿಗೆ ಸಂಬಂಧಪಟ್ಟಂತೆ ಅನುದಾನ ಬಿಡುಗಡೆಯಲ್ಲಿ ತಾಲೂಕಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕುಡಿವ ನೀರಿನ ಯೋಜನೆಗಾಗಿ ಜಿಲ್ಲೆಗೆ ₹20 ಲಕ್ಷ ಬಂದಿದೆ. ಇತರೆ ತಾಲೂಕುಗಳಿಗೆ ಹಣ ನೀಡಿದ್ದಾರೆ. ಆದರೆ, ನಮ್ಮ ತಾಲೂಕಿನ ಯಾವ ಜಿಪಂ ಸದಸ್ಯರಿಗೂ ಅನುದಾನ ನೀಡಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಷ್ಟು ದಿನ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ವ್ಯವಸ್ಥೆಯನ್ನು ಒಬ್ಬಿಬ್ಬರಿಂದ ಸರಿಪಡಿಸಲು ಸಾಧ್ಯವಿಲ್ಲ. ಎಲ್ಲರೂ ಸೇರಿ ಸರಿಪಡಿಸೋಣ. ಸೋಮವಾರ ಶಿವಮೊಗ್ಗದಲ್ಲಿ ತ್ರೈಮಾಸಿಕ ಸಭೆ ಇದೆ. ಅಲ್ಲಿ ಈ ಬಗ್ಗೆ ಸಿಇಒ ಬಳಿ ಚರ್ಚೆ ನಡೆಸೋಣ ಎಂದು ತಿಳಿಸಿದರು.
ಕ್ಯಾಂಪ್ಕೋ ನೇರ ಅಡಕೆ ಖರೀದಿಯಿಂದ ಅಡಕೆ ಬೆಳೆಗಾರರು ಸಾವಿರಾರು ರುಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಕ್ಯಾಂಫ್ಕೋ ಸ್ಥಳೀಯ ಅಡಕೆ ಬೆಳೆಗಾರರ ಹಿತಾಸಕ್ತಿ ಪರಿಗಣಿಸುತ್ತಿಲ್ಲ. ಮಲೆನಾಡು ಹಾಗೂ ದಕ್ಷಿಣ ಕನ್ನಡ ಭಾಗದ ಅಡಕೆಗೆ ಬೇರೆಬೇರೆ ಬೆಲೆ ನಿಗಧಿ ಮಾಡುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಕ್ಯಾಂಪ್ಕೋಗೆ ತಿಳಿಸಿದ್ದಾಗ್ಯೂ ಯಾವುದೆ ಕ್ರಮ ಕೈಗೊಂಡಿಲ್ಲ. ಕ್ಯಾಂಪ್ರೋ ಸಹ ಈ ಟೆಂಡರ್ ಮೂಲಕ ಅಡಕೆ ಖರೀದಿಸುವಂತೆ ಸೂಕ್ತ ತಿದ್ದುಪಡಿ ತರಬೇಕು ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಎಪಿಎಂಸಿ ಸದಸ್ಯ ಪಿ.ಎನ್. ಸುಬ್ರಾವ್ ಸಚಿವರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಈ ಬಗ್ಗೆ ಕ್ಯಾಂಪ್ಕೋ ಸಂಸ್ಥೆ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ನ.13ರಂದು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆಗೆ ಒಳಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.