
ಮೈಸೂರು: ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹೂರ್ತ ನಿಗದಿಯಾಗಿದೆ. ಕನ್ನಡಿಗರ ಮೇರು ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರೊಂದಿಗೆ ಚರ್ಚಿಸಿ ನವೆಂಬರ್ ತಿಂಗಳಿನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಡಿಸೆಂಬರ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ ಜರುಗಲಿದೆ. ಅದಕ್ಕೂ ಮುನ್ನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಲಾಗುತ್ತಿದೆ ಎಂದರು. ಅರಮನೆ ಮುಂಭಾಗ, ಅರಮನೆ ಆವರಣ, ವಸ್ತು ಪ್ರದರ್ಶನ ಪ್ರಾಧಿಕಾರ ಅಥವಾ ಮಹಾರಾಜ ಕಾಲೇಜಿನ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಆಲೋಚನೆ ಇದೆ. ಆದರೆ ಇನ್ನೂ ನಿಗದಿತ ಸ್ಥಳವನ್ನು ಗೊತ್ತುಪಡಿಸಿಲ್ಲ. ಈ ಸಂಬಂಧ ಸ್ವಾಗತ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ನಂತರ ಆ ಸಮಿತಿಗಳ ಮೂಲಕ ಸಮ್ಮೇಳನದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ: ಸದ್ಯಕ್ಕೆ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಅಕ್ಟೋಬರ್ ಕೊನೆಯಲ್ಲಿ ಸಮ್ಮೇನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಈಗ ಸಮ್ಮೇಳನದ ಪೂರ್ವ ಸಿದ್ಧತೆಗಳ ಬಗ್ಗೆ ಮಾತ್ರವೇ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ವಸತಿ, ಊಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಮೈಸೂರು ಜಿಲ್ಲಾ ಕಸಾಪದ ಪದಾಧಿಕಾರಿಗಳೇ ವ್ಯವಸ್ಥೆ ಮಾಡಲಿದ್ದಾರೆ ಎಂದು ವಿವರಿಸಿದರು.
ಕವಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಎಚ್.ಎಸ್. ವೆಂಕಟೇಶಮೂರ್ತಿ, ವಿಮರ್ಶಕಿ ಎಂ.ಎಸ್. ಆಶಾದೇವಿ, ನಾಟಕಕಾರ ಹಾಗೂ ವಿಮರ್ಶಕ ಕೆ.ವೈ. ನಾರಾಯಣಸ್ವಾಮಿ ಮತ್ತು ಲೇಖಕ ಕಾ.ತ. ಚಿಕ್ಕಣ್ಣ ಅವರನ್ನೊಳಗೊಂಡ ಸಮಿತಿಯು ಸಮ್ಮೇಳನದ ಗೋಷ್ಠಿಗಳಿಗೆ ವಿಷಯಗಳನ್ನು ಆಯ್ಕೆ ಮಾಡಲಿದೆ. ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಕಸಾಪದ ಆವರಣದಲ್ಲಿ ಕಟ್ಟುತ್ತಿರುವ ಶತಮಾನೋತ್ಸವ ಭವನವನ್ನು ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ತದನಂತರ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ಹೊರನಾಡು-ಹೊರದೇಶ ಕನ್ನಡಿಗರ ಸಮಾವೇಶ: 2018ರ ಫೆಬ್ರವರಿಯಲ್ಲಿ ಮುಂಬೈನಲ್ಲಿ ಹೊರನಾಡ
ಕನ್ನಡಿಗರ ಸಮಾವೇಶ ಏರ್ಪಡಿಸಲಾಗುವುದು. ಬಹೇರಿನ್, ದುಬೈ ಅಥವಾ ಸಿಂಗಾಪುರಲ್ಲಿ ಹೊರರಾಷ್ಟ್ರ ಕನ್ನಡಿಗರ ಸಮಾವೇಶ ನಡೆಸುವ ಚಿಂತನೆ ಇದೆ. ಇದಕ್ಕೆ ಹಂಪಿ ವಿಶ್ವವಿದ್ಯಾಲಯದ ಸಹಕಾರ ಕೋರಲಾಗಿದೆ. ಕಳೆದ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ತೆಗದುಕೊಳ್ಳಲಾದ ನಿರ್ಣಯಗಳನ್ನು ಈಡೇರಿಸುವ ಕಾರ್ಯ ಜಾರಿಯಲ್ಲಿದೆ.
ರಾಷ್ಟ್ರಕವಿ ಘೋಷಣೆ ಬಗ್ಗೆ 82ನೇ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ರಾಷ್ಟ್ರಕವಿ ಘೋಷಣೆ ಕಾರ್ಯ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದರು. ಈ ವೇಳೆ ಕಸಾಪದ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಡಿ. ರಾಜಣ್ಣ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.