
ಮುಂಬೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಇತ್ತ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದ್ದರೆ, ಅತ್ತ ಅವರ ಮಾಜಿ ಪತ್ನಿ ಸಾರಿಕಾ ಅಕ್ಷರಶಃ ಅನಾಥೆಯಾಗಿದ್ದಾರೆ. ಪತಿಯಿಂದ ದೂರವಾದ ಬಳಿಕ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದ ಸಾರಿಕಾ ಇದೀಗ ಸಂಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾರೆ.
ನೂರಾರು ಕೋಟಿ ರು.ಮೌಲ್ಯದ ಆಸ್ತಿಯನ್ನು ಸಾರಿಕಾರ ತಾಯಿ ಕಮಲಾ ಠಾಕೂರ್, ತಮ್ಮನ್ನು ನೋಡಿಕೊಳ್ಳುತ್ತಿದ್ದ ವೈದ್ಯರಿಗೆ ಹೆಸರಿಗೆ ವಿಲ್ ಮಾಡಿಕೊಟ್ಟಿದ್ದಾರೆ. ಹೀಗಾಗಿ ಉದ್ಯೋಗವೂ ಇಲ್ಲದೇ, ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಒಂದು ಕಾಲದ ಪ್ರಸಿದ್ಧ ನಟಿ, ಇದೀಗ ತಾಯಿಯ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಾರಿಕಾರ ಸಂಕಷ್ಟ ನೋಡಿ, ಅವರಿಗೆ ನಟ ಅಮೀರ್ ಖಾನ್ ನೆರವು ನೀಡಲು ಮುಂದಾಗಿದ್ದು, ಕಾನೂನು ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಕಮಲ್ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಅವರನ್ನು ವರಿಸಿದ್ದ ಸಾರಿಕಾ, ತಾಯಿಯಿಂದ ದೂರವಾಗಿದ್ದರು.
1998-2004ರವರೆಗೆ ಕಮಲ್ ಜೊತೆ ವಾಸವಿದ್ದ ಸಾರಿಕಾ, ಶೃತಿ ಹಾಸನ್ ಮತ್ತು ಅಕ್ಷರ ಹಾಸನ್‌ಗೆ ಜನ್ಮ ನೀಡಿದ್ದರು. ಆದರೆ 2004ರಲ್ಲಿ ಕಮಲ್‌ರಿಂದ ದೂರವಾದ ಬಳಿಕ ಮುಂಬೈಗೆ ತೆರಳಿದ ಸಾರಿಕಾ ಅಲ್ಲೇ ಉದ್ಯೋಗ ಅರಸಿ, ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದರು. ಮತ್ತೊಂದೆಡೆ ಸಾರಿಕಾರ ತಾಯಿ ಕಮಲಾ ಠಾಕೂರ್ ಮುಂಬೈನ ಐಷಾರಾಮಿ ಜುಹು ಪ್ರದೇಶದಲ್ಲಿ ಬೃಹತ್ ಫ್ಲ್ಯಾಟ್ ಮತ್ತು ಪುಣೆ ಸಮೀಪ 300 ಎಕರೆ ಜಾಗದೊಂದಿಗೆ ನೂರಾರು ಕೋಟಿ ರು. ಆಸ್ತಿ ಹೊಂದಿದ್ದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಪುತ್ರಿಯೊಂದಿಗೆ ಕಮಲಾಗೆ ಉತ್ತಮ ಸಂಬಂಧವಿರಲಿಲ್ಲ. ಈ ನಡುವೆ ಕೆಲ ದಿನಗಳ ಹಿಂದೆ ಕಮಲಾ ಠಾಕೂರ್ ನಿಧನ ಹೊಂದಿದರು. ಆನಂತರವಷ್ಟೇ ಕಮಲಾ ತಮ್ಮೆಲ್ಲಾ ಆಸ್ತಿಯನ್ನು, 1984ರಿಂದ ತಮ್ಮ ಆರೋಗ್ಯ ನೋಡಿಕೊಳ್ಳುತ್ತಿದ್ದ ಡಾ. ವಿಕ್ರಮ್ ಠಕ್ಕರ್ ಎಂಬುವವರ ಹೆಸರಿಗೆ ಬರೆದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ತಾಯಿ ಆಸ್ತಿ ತಮ್ಮ ಪಾಲಿಗೆ ಬರಲಿದೆ ಎಂದೆಣಿಸಿದ್ದ ಸಾರಿಕಾಗೆ ಶಾಕ್ ಹೊಡೆದಿದೆ. ಹೀಗಾಗಿ ಸಾರಿಕಾ ಇದೀಗ ಆಸ್ತಿ ತಮಗೆ ಸೇರಬೇಕು. ತಮಗೆ ಮುಂಬೈನಲ್ಲಿ ವಾಸಿಸಲು ಮನೆ ಕೂಡಾ ಇಲ್ಲ. ತಾವು ಸಂಕಷ್ಟದಲ್ಲಿ ಇರುವುದಾಗಿ ಹೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಾರಿಕಾರ ಪುತ್ರಿ ಹಾಗೂ ನಟಿ ಶ್ರುತಿ ಹಾಸನ್ ಮುಂಬೈನಲ್ಲಿ ಅಪಾರ್ಟ್’ಮೆಂಟ್ ಹೊಂದಿದ್ದಾರೆ. ಇನ್ನೊಬ್ಬ ಪುತ್ರಿ ಅಕ್ಷರಾ ತಂದೆ ಕಮಲ್ ಹಾಸನ್ ಜೊತೆ ಚೆನ್ನೈನಲ್ಲಿದ್ದಾರೆ. ಈ ಮಧ್ಯೆ ಸಾರಿಕಾ ತಮ್ಮ ಕೌಟುಂಬಿಕ ಆಸ್ತಿ ವಿವಾದವನ್ನು ಬಗೆಹರಿಸಲು ನಟ ಅಮೀರ್ ಖಾನ್ ನೆರವು ಪಡೆದು ಕೊಂಡಿದ್ದಾರೆ. ಅಮೀರ್ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.