ಇಂದು ‘ನಮ್ಮ ಬೆಂಗಳೂರು ಹಬ್ಬ’; ‘ಬ್ರ್ಯಾಂಡ್ ಬೆಂಗಳೂರು’ ಲಾಂಛನ ಅನಾವರಣ

By Suvarna Web DeskFirst Published Dec 24, 2017, 7:27 AM IST
Highlights
  • ಇಂದು ವಿಧಾನಸೌಧ ಎದುರು ಜಾತ್ರೆ
  • ವಿಧಾನಸೌಧ ಮುಂಭಾಗದ ಮೆಟ್ಟಿಲಿನವರೆಗೂ ಸಾರ್ವಜನಿಕರಿಗೆ ಪ್ರವೇಶಾವಕಾಶ.
  • ವಿಧಾನಸೌಧ ಎದುರಿನ ರಸ್ತೆಯಲ್ಲಿ ವಾಹನ ಪ್ರವೇಶ ನಿಷಿದ್ಧ. ‘ಓಪನ್‌ಸ್ಟ್ರೀಟ್’ನಲ್ಲಿ ಮುಕ್ತವಾಗಿ ಓಡಾಡಿ
  • ಲಾಂಛನ ಲಾಂಚ್

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ರೂಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ನ್ಯೂಯಾರ್ಕ್, ಲಂಡನ್, ಮೆಲ್ಬರ್ನ್ ಮುಂತಾದ ನಗರಗಳಿಗಿರುವಂತೆ ಉದ್ಯಾನ ನಗರಿಗೆ ಪ್ರತ್ಯೇಕ ಲಾಂಛನ (ಲೋಗೋ) ಬಿಡುಗಡೆ ಮಾಡಲಾಗುತ್ತಿದೆ.

ಇನ್ಮುಂದೆ ಜಗತ್ತಿನಾದ್ಯಂತ ಬೆಂಗಳೂರಿನ ಹೆಗ್ಗುರುತಾಗಿ ಪರಿಗಣಿಸಲ್ಪಡುವ ಈ ಲೋಗೋ ಭಾನುವಾರ ವಿಧಾನಸೌಧದ ಮುಂಭಾಗ ನಡೆಯಲಿರುವ ನಮ್ಮ ಬೆಂಗಳೂರು ಹಬ್ಬದಲ್ಲಿ ಬಿಡುಗಡೆಯಾಗಲಿದೆ. ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಬೆಂಗಳೂರಿನ ಗುರುತನ್ನು ಸ್ಥಾಪಿಸುವುದಕ್ಕೆ ಪ್ರವಾಸೋದ್ಯಮ ಇಲಾಖೆಯು ಬ್ರ್ಯಾಂಡ್ ಬೆಂಗಳೂರು ಲಾಂಛನವನ್ನು ಬಳಸಿಕೊಳ್ಳಲಿದೆ.

ಪ್ರವಾಸೋದ್ಯಮ ಇಲಾಖೆಯ ಎರಡನೇ ಆವೃತ್ತಿಯ ‘ನಮ್ಮ ಬೆಂಗಳೂರು ಹಬ್ಬ’ಕ್ಕೆ ವಿಧಾನಸೌಧದ ಆವರಣದಲ್ಲಿ ವೇದಿಕೆ ಸಜ್ಜುಗೊಂಡಿದ್ದು, ಡಿ.24ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿಧಾನಸೌಧದ ಆವರಣವು ಸಾರ್ವಜನಿಕರಿಗೆ ಮುಕ್ತಗೊಳ್ಳಲಿದೆ.

ಒಂದು ದಿನದ ಮಟ್ಟಿಗೆ ವಿಧಾನಸೌಧ ಮುಂಭಾಗದ ರಸ್ತೆಯು ಪಾದಚಾರಿಗಳಿಗೆ ಮಾತ್ರ ಸೀಮಿತವಾಗಲಿದ್ದು, ‘ಓಪನ್ ಸ್ಟ್ರೀಟ್’ನಲ್ಲಿ ಸ್ಥಳೀಯ ಕಲೆಗಳ ಪ್ರದರ್ಶನ, ಫುಡ್ ಕೋರ್ಟ್, ಫ್ಯಾಬ್ ಡ್ಯಾನ್ಸ್ , ಚಲನಚಿತ್ರ ಪ್ರದರ್ಶನ, ಕಾರ್ಯಾಗಾರ ಸೇರಿದಂತೆ ನಗರದ ನಾಗರಿಕರು ಖುಷಿಯಿಂದ ಭಾಗವಹಿಸಲು ಅಗತ್ಯವಾದ ಎಲ್ಲಾ ಅವಕಾಶಗಳನ್ನು ಸೃಷ್ಟಿಸಲಾಗಿದೆ.

ವಿಶಿಷ್ಟ ಲಾಂಛನ, ಆ್ಯಪ್ ಬಿಡುಗಡೆ: ಉದ್ಯಾನನಗರಿಗೆ ‘ಬ್ರ್ಯಾಂಡ್ ಬೆಂಗಳೂರು’ ಅಡಿ ಜಾಗತಿಕ ಮಟ್ಟದಲ್ಲಿ ಪ್ರತ್ಯೇಕ ಗುರುತು ತಂದುಕೊಡುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಯು ನಮ್ಮ ಬೆಂಗಳೂರು ಹಬ್ಬದ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಲಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ‘ಬ್ರ್ಯಾಂಡ್ ಬೆಂಗಳೂರು’ ಲೋಗೋ ಅನಾವರಣಗೊಳಿಸಲಿದ್ದಾರೆ. ಜತೆಗೆ ಬ್ರ್ಯಾಂಡ್ ಬೆಂಗಳೂರು ಮೊಬೈಲ್ ಆ್ಯಪ್ ಕೂಡಬಿಡುಗಡೆಗೊಳ್ಳಲಿದೆ.

ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಕಬ್ಬನ್‌ಪಾರ್ಕ್ ಆವರಣದಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಬ್ರ್ಯಾಂಡ್ ಬೆಂಗಳೂರು ವಿಶಿಷ್ಟ ಲಾಂಛನ ಅನಾವರಣಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್, ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮೇಯರ್ ಸಂಪತ್‌ರಾಜ್ ಸೇರಿ ಹಲವರು ಭಾಗವಹಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಅಮೆರಿಕದ ನ್ಯೂಯಾರ್ಕ್‌ಗೆ ಪ್ರತ್ಯೇಕ ಲೋಗೋ ಇದೆ. ಅದರಲ್ಲಿ ಐ ಲವ್ ನ್ಯೂಯಾರ್ಕ್ ಎಂಬುದನ್ನು ವಿಶಿಷ್ಟ ವಿಧಾನದಲ್ಲಿ ಬರೆಯಲಾಗುತ್ತದೆ. ಹಾಗೆಯೇ ಲಂಡನ್, ಆಮ್‌ಸ್ಟರ್‌ಡ್ಯಾಂ, ಮೆಲ್ಬರ್ನ್ ಅನ್ನೂ ವಿಶಿಷ್ಟ ವಿಧಾನದಲ್ಲಿ ಬರೆಯಲಾಗುತ್ತದೆ. ಆದರೆ ಬೆಂಗಳೂರನ್ನು ನಾವು ಹೊರಗಿನಿಂದ ಹೇಗೆ ಗುರುತಿಸಬಹುದು? ಹಲವು ತಿಂಗಳ ಕಾಲ ಯೋಜನೆ ಮತ್ತು ಪೂರ್ವ ಸಿದ್ಧತೆಯ ನಂತರ ಬೆಂಗಳೂರು ನಗರಕ್ಕೆ ಸೂಕ್ತವಾದ ಗುರುತನ್ನು ನಾವು ರೂಪಿಸಿದ್ದೇವೆ. ವಾಸ್ತವವಾಗಿ, ಸಾರ್ವಜನಿಕರೇ ರೂಪಿಸಿರುವ ಕ್ರಿಯಾಶೀಲವಾದ ಗುರುತು ಇದಾಗಿದೆ. ನಗರ ಮತ್ತು ನಗರದ ಜನರ ಭಾವವನ್ನು ಇದು ಹೊಂದಿದೆ ಎಂದು ಹೇಳಿದ್ದಾರೆ.

click me!