ಆಮರಣಾಂತ ಉಪವಾಸ ಕೈಬಿಡಲು ಕಲಗೋಡು ರತ್ನಾಕರ್ ಮನವಿ

By Web DeskFirst Published Oct 6, 2016, 4:08 PM IST
Highlights

ಹೊಸನಗರ (ಅ.06): ಗೇರುಪುರ ಕಲ್ಲು ಗಣಿಗಾರಿಕೆ ಪರವಾನಗಿ ರದ್ದು ಮಾಡುವಂತೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸ ಧರಣಿ ಸ್ಥಳಕ್ಕೆ ಜಿಪಂ ಸದಸ್ಯ ಕಲಗೋಡು ರತ್ನಾಕರ್‌ ಹಾಗೂ ತಾಪಂ ಸದಸ್ಯ ಬಿ.ಜಿ.ಚಂದ್ರಮೌಳಿ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.

ಗುರುವಾರ ಅರಳಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ಅವರು, ಕಲ್ಲು ಗಣಿ ಮಾಲೀಕ ಹಾಗೂ ಪ್ರತಿಭಟನಾಕಾರರ ಜತೆ ಸಂಧಾನಕ್ಕೆ ಪ್ರಯತ್ನಿಸಿದರು. ಕಲ್ಲು ಗಣಿಗಾರಿಕೆಯಲ್ಲಿ ಸಿಡಿಮದ್ದು, ಸ್ಪೋಟಕಗಳನ್ನು ಬಳಸಬಾರದು. ಇದರಿಂದ ಮನೆ, ಜಾನುವಾರು, ಕೃಷಿಗೆ ಹೆಚ್ಚಿನ ಅನಾಹುತ ಆಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪರವಾನಗಿ ಪಡೆಯುವಾಗ ಗುತ್ತಿಗೆದಾರರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಆಮಿಶಕ್ಕೆ ಬಲಿಯಾಗಿ ತಪ್ಪು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಗಣಿ ಮಾಲೀಕ ಗುರುಪ್ರಸಾದ್‌ ಮಾತನಾಡಿ, ಪರಿಸರ, ಜನವಸತಿ, ಮನೆ, ಕೃಷಿಗೆ ಹಾನಿಯಾಗದಂತೆ ಕಲ್ಲುಗಣಿಗಾರಿಕೆ ನಡೆಸಲಾಗುವುದು. ಕಲ್ಲುಗಳನ್ನು ಒಡೆಯಲು ಸರ್ಕಾರ ನಿಗದಿ ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಸಿಡಿಮದ್ದು ಹಾಗೂ ಸ್ಫೋಟಕಗಳನ್ನು ಬಳಸುವುದಿಲ್ಲ. ಕಲ್ಲು ಒಡೆಯುವ ತಂತ್ರಜ್ಞರು ನೀಡಿದ ಸಲಹೆ, ಸೂಚನೆಯಂತೆ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ, ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಮುಷ್ಕರ ನಿಲ್ಲಿಸುವಂತೆ ಮನವಿ ಮಾಡಿದರು.

click me!