ಕನ್ನಡಪ್ರಭ ಪತ್ರಕರ್ತನಿಗೆ ಪ.ಗೋ ಪ್ರಶಸ್ತಿ; ಪ್ರಶಸ್ತಿ ಮೊತ್ತ ಕೊರಗ ವಿದ್ಯಾರ್ಥಿನಿ ಶಿಕ್ಷಣಕ್ಕೆ ನೀಡಿದ ಸಂದೀಪ್ ವಾಗ್ಲೆ

By Suvarna Web DeskFirst Published Apr 15, 2017, 5:01 PM IST
Highlights

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂದೀಪ್ ವಾಗ್ಲೆ, ಈ ಪ್ರಶಸ್ತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ. ಕೊರಗ ಜನಾಂಗದ ವರದಿಗೆ ಬಂದ ಈ ಪ್ರಶಸ್ತಿ ಮೊತ್ತವನ್ನು ಅದೇ ಸಮುದಾಯದ ಕುಟುಂಬಕ್ಕೆ ಹಸ್ತಾಂತರಿಸುತ್ತಿದ್ದೇನೆ. ಪ್ರಶಸ್ತಿಗಳನ್ನು ಒಂದೇ ಸಂಘ ಸಂಸ್ಥೆಗಳು ಕೊಡುವಂತೆ ಆಗಬೇಕು. ಅದರಲ್ಲಿ ವೈರುಧ್ಯಗಳು ಇರಬಾರದು ಎಂದರು. 

ಮಂಗಳೂರು (ಏ.15): ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ೨೦೧೬ನೇ ಸಾಲಿನ ಪ.ಗೋ.(ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿಯನ್ನು ‘ಕನ್ನಡಪ್ರಭ’ ಮಂಗಳೂರು ಆವೃತ್ತಿಯ ಹಿರಿಯ ವರದಿಗಾರ ಸಂದೀಪ್ ವಾಗ್ಲೆ ಅವರಿಗೆ ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
2016 ಜು.26ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ ‘ನಾಡಿಗೆ ಬಂದು ಸೊರಗಿನ ಕೊರಗರು’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ಲಭಿಸಿದೆ. ₹10,001 ನಗದು, ಪ್ರಶಸ್ತಿ ಪತ್ರ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರದಾನ ಮಾಡಿದರು. 
ಬಳಿಕ ಈ ಪ್ರಶಸ್ತಿಯ ನಗದು ಮೊತ್ತವನ್ನು ಸಂದೀಪ ವಾಗ್ಲೆ ಅವರು ಮಂಜನಾಡಿಯ ಮೊಂಟೆಪದವು ನಿವಾಸಿ ರೂಪ ಅವರಿಗೆ ಹಸ್ತಾಂತರಿಸಿದರು. ರೂಪ ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ಈ ಮೊತ್ತವನ್ನು ಕೊಡುಗೆಯಾಗಿ ನೀಡಲಾಯಿತು. 
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪ್ರದೀಪ್ ಕುಮಾರ್ ಕಲ್ಕೂರ, ಮಾಧ್ಯಮ ಕ್ಷೇತ್ರದಲ್ಲಿ ವ್ಯಕ್ತಿಗತ ತೇಜೋವಧೆ ಸಲ್ಲದು. ಇಂತಹ ವಿಚಾರದಲ್ಲಿ ಪ.ಗೋ. ಕಟ್ಟುನಿಟ್ಟಾಗಿದ್ದರು. ಪ.ಗೋ. ಹಾದಿಯಲ್ಲಿ ಪತ್ರಕರ್ತರು ಮುನ್ನಡೆಯಬೇಕು ಎಂದು ಆಶಿಸಿದರು. 
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂದೀಪ್ ವಾಗ್ಲೆ, ಈ ಪ್ರಶಸ್ತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ. ಕೊರಗ ಜನಾಂಗದ ವರದಿಗೆ ಬಂದ ಈ ಪ್ರಶಸ್ತಿ ಮೊತ್ತವನ್ನು ಅದೇ ಸಮುದಾಯದ ಕುಟುಂಬಕ್ಕೆ ಹಸ್ತಾಂತರಿಸುತ್ತಿದ್ದೇನೆ. ಪ್ರಶಸ್ತಿಗಳನ್ನು ಒಂದೇ ಸಂಘ ಸಂಸ್ಥೆಗಳು ಕೊಡುವಂತೆ ಆಗಬೇಕು. ಅದರಲ್ಲಿ ವೈರುಧ್ಯಗಳು ಇರಬಾರದು ಎಂದರು. 
ಆಧುನೀಕರಣದ ವೈಭವದಿಂದ ನೆಮ್ಮದಿ ದೊರಕಲು ಸಾಧ್ಯವಿಲ್ಲ. ಸುದ್ದಿಗಳು ಅಭಿಪ್ರಾಯ ವ್ಯಕ್ತಪಡಿಸುವ ಲೇಖನದ ರೂಪ ತಾಳುತ್ತಿವೆ. ಇಂತಹ ವರದಿಗಳು ಸಮಾಜಕ್ಕೆ ಘಾಸಿ ಉಂಟುಮಾಡಬಲ್ಲವು. ಕೇಸರಿ, ಬಿಳಿ, ಕೆಂಪು ಎಂದು ಬಣ್ಣ ಬಳಿಯುವ ಪ್ರವೃತ್ತಿ ಪತ್ರಿಕೆಗಳಿಗೆ ಇರಬಾರದು. ಪ್ರಸ್ತುತ ಪತ್ರಿಕೆಯ ಸಿದ್ಧಾಂತಗಳಿಗೆ ವರದಿಗಾರ ಸ್ಪಂದಿಸುವ ಪರಿಸ್ಥಿತಿ ತಲೆದೋರಿದೆ. ಜನಸಾಮಾನ್ಯರಿಗೆ ತೊಂದರೆಯಾದಾಗ ಪತ್ರಿಕೆಗಳು ಧ್ವನಿ ಎತ್ತುವುದಿಲ್ಲ. ಪತ್ರಿಕೋದ್ಯಮ ಹೂಜಿ ಇದ್ದಂತೆ, ಅದರೊಳಗಿನಿಂದ ಹಣ ಪಡೆಯುವ ಬದಲು ಯಶಸ್ಸು ಪಡೆಯುವಂಥ ಪತ್ರಕರ್ತರ ಅಗತ್ಯವಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು. 
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಪ.ಗೋ.ಸಂಸ್ಮರಣೆ ಮಾಡಿ, ಪ.ಗೋ. ಸ್ವಾವಲಂಬಿಯಾಗಿದ್ದರು. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸುವ ದೊಡ್ಡ ಕಲೆ ಅವರಿಗೆ ಸಿದ್ಧಿಸಿತ್ತು. ಇಂದಿನ ಪತ್ರಕರ್ತರು ಸ್ವಾನುಭವವನ್ನು ವರದಿಗಳಲ್ಲಿ ಕಾಣಿಸದೆ, ಸಾರ್ವಜನಿಕರ ಅಭಿಪ್ರಾಯಗಳನ್ನು ಉಲ್ಲೇಖಿಸಬೇಕು ಎಂದರು. 
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು. 
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪ.ಗೋ. ಅವರ ಪತ್ನಿ ಸಾವಿತ್ರಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಇದ್ದರು. 
ಪತ್ರಕರ್ತರಾದ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿ, ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸುಕೇಶ್ ಕುಮಾರ್ ನಿರೂಪಿಸಿದರು.
click me!