
ಬೆಂಗಳೂರು : ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಸಿಸಿಬಿ ಘನತೆಗೆ ಧಕ್ಕೆ ತರುವ ಚಿತಾವಣೆ ನಡೆಸಿದ ಆರೋಪದಡಿ ಪತ್ರಕರ್ತರೊಬ್ಬರನ್ನು ಭಾನುವಾರ ಬಂಧಿಸಲಾಗಿದೆ.
ಪತ್ರಕರ್ತ ಅಶೋಕ್ ಬಂಧಿತರು. ಪ್ರಕರಣದಲ್ಲಿ ಆರೋಪಿಯನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಹಾಗೂ 120ಬಿ (ಅಪರಾಧ ಸಂಚು) ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಸಿಪಿ ಎಸ್.ಗಿರೀಶ್ ಹೇಳಿದರು.
ಡಿ.12ರಂದು ಸಿರಾಜುದ್ದೀನ್ ಹಾಗೂ ಜಯೀದ್ ಖಾನ್ ಎಂಬುವರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಫರೀದ್ ಬೆನ್ನಿಗೆ ಪೊಲೀಸರು ನಿಂತಿದ್ದಾರೆ. ಭೂಗತ ಜಗತ್ತಿನ ಕೆಲವರ ಜತೆ ಸಿಸಿಬಿಯವರು ಸ್ನೇಹ ಹೊಂದಿದ್ದಾರೆ. ಹೀಗಾಗಿ ವಂಚನೆ ಪ್ರಕರಣದಲ್ಲಿ ಫರೀದ್‌ಗೆ ಸುಲಭವಾಗಿ ಜಾಮೀನು ದೊರೆತಿದೆ. ಗ್ರಾಹಕರ ಹಣ ಕೂಡ ವಾಪಸ್ ಬರುವುದಿಲ್ಲ ಎಂದು ಆರೋಪಿಸಿದ್ದರು.
ಈ ಸಂಬಂಧ ಸುಳ್ಳು ಸುದ್ದಿಗೋಷ್ಠಿ ಕರೆದು ತನಿಖಾ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಾರೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸಿಸಿಬಿ ಇನ್ಸ್‌ಪೆಕ್ಟರ್ ಮಂಜುನಾಥ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಸಿಸಿಬಿ ಪೊಲೀಸರು ಸಿರಾಜುದ್ದೀನ್ ಹಾಗೂ ಜಯೀದ್ ಖಾನ್ ಮನೆ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದರು. ಸಿಸಿಬಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸುವಂತೆ ವಿಜಯ್ ಟಾಟಾ ಸೂಚಿಸಿದ್ದರು. ಇದಕ್ಕೆ ಅವರ ಕಚೇರಿಯಲ್ಲಿ ಸಿದ್ಧತೆ ಮಾಡಲಾಗಿತ್ತು. ಅವರ ಮಾತಿನಂತೆ ಸುದ್ದಿಗೋಷ್ಠಿ ನಡೆಸಿದ್ದೆವು. ಯಾವ ರೀತಿ ಮಾತನಾಡಬೇಕು ಎಂದು ನಮಗೆ ಹೇಳಿಕೊಟ್ಟಿದ್ದು ಅಶೋಕ್. ಅವರೇ ಪತ್ರಿಕಾ ಪ್ರಕಟಣೆ ಸಿದ್ಧಪಡಿಸಿಕೊಟ್ಟಿದ್ದರು ಎಂದು ತನಿಖೆ ವೇಳೆ ಆರೋಪಿಗಳು ಮಾಹಿತಿ ನೀಡಿದ್ದರು. ಅವರ ಹೇಳಿಕೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.