ಸಚಿವ ಸ್ಥಾನಕ್ಕಾಗಿ ಜೆಡಿಎಸ್ ಮುಖಂಡ ರಾಜೀನಾಮೆ?

By Web DeskFirst Published Sep 6, 2018, 10:33 AM IST
Highlights

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಮುಖಂಡ ಹಾಗೂ ವಿಧಾನ ಸಭೆಯ ಉಪ ಸಭಾಪತಿ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. 

ಬೆಂಗಳೂರು/ಚಿಕ್ಕಬಳ್ಳಾಪುರ :  ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಧಾನಸಭೆಯ ಉಪ ಸಭಾಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಜೆಡಿಎಸ್‌ ಪಾಳೆಯದಿಂದ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಇದೆ. ಈ ತಿಂಗಳಾಂತ್ಯದಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇರುವುದರಿಂದ ಇರುವ ಒಂದು ಸ್ಥಾನ ತಮಗೆ ಸಿಗಬೇಕು ಎಂಬ ಉದ್ದೇಶದಿಂದ ಒತ್ತಡ ತಂತ್ರದ ಭಾಗವಾಗಿ ರೆಡ್ಡಿ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.

ಪಕ್ಷದ ಮೇಲೆ ಅಥವಾ ವರಿಷ್ಠರ ಮೇಲೆ ಮುನಿಸಿಕೊಂಡು ಇಂತಹ ತೀರ್ಮಾನ ಕೈಗೊಂಡಿಲ್ಲ. ಬದಲಿಗೆ ಹಿರಿಯರು ನಿರ್ವಹಿಸಬೇಕಾದ ಜವಾಬ್ದಾರಿ ತಾವು ನಿರ್ವಹಿಸುವುದು ಸೂಕ್ತವಲ್ಲ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದು, ಈ ತಿಂಗಳ 12ರಂದು ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಸಂಭವವಿದೆ ಎನ್ನಲಾಗಿದೆ.

ಈ ಹಿಂದೆಯೇ ವರಿಷ್ಠರ ಬಳಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದ ಕೃಷ್ಣಾರೆಡ್ಡಿ ಅವರು ಒಲ್ಲದ ಮನಸ್ಸಿನಿಂದಲೇ ಉಪ ಸಭಾಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ್ದರು. ಈ ಹುದ್ದೆ ಇಲ್ಲದಿದ್ದರೂ ಸರ್ಕಾರದ ಮಟ್ಟದಲ್ಲಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಯಾವುದೇ ತೊಂದರೆ ಇಲ್ಲದ ಕಾರಣ ಹಿರಿಯರಿಗೆ ಹುದ್ದೆ ಬಿಟ್ಟುಕೊಟ್ಟು ಶಾಸಕರಾಗಿ ಮುಂದುವರಿಯಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಅಲ್ಲದೆ ಪ್ರಸ್ತುತ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಹಿರಿಯ ಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ ಮುಂತಾದವರನ್ನು ಉಪಸಭಾಧ್ಯಕ್ಷ ಹುದ್ದೆಗೆ ನೇಮಿಸುವಂತೆ ಕೃಷ್ಣಾರೆಡ್ಡಿ ಅವರೇ ಸಲಹೆ ನೀಡಿದ್ದಾರೆ. ಜೆಡಿಎಸ್‌ನಲ್ಲಿ ರೆಡ್ಡಿ ಸಮುದಾಯದಿಂದ ಯಾರಿಗೂ ಮಂತ್ರಿ ಸ್ಥಾನ ಸಿಗದಿರುವುದರಿಂದ ತಮಗೆ ಕೊಡಬೇಕು ಎಂಬ ವಾದವನ್ನು ಅವರು ಪಕ್ಷದ ವರಿಷ್ಠರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಕೃಷ್ಣಾರೆಡ್ಡಿ ನಿಲುವಿನ ಬೆನ್ನಲ್ಲೇ ಗೌರಿಬಿದನೂರು ತಾಲೂಕು ಜೆಡಿಎಸ್‌ ಪಕ್ಷದ ಅಧ್ಯಕ್ಷ ಸಿ.ಮಂಜುನಾಥರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

click me!