
ಇಸ್ಲಾಮಾಬಾದ್(ಏ. 20): ನವಾಜ್ ಷರೀಫ್ ಪ್ರಧಾನಿ ಸ್ಥಾನ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಷರೀಫ್'ರನ್ನು ಅನರ್ಹಗೊಳಿಸದಿರಲು ಪಾಕ್ ಸುಪ್ರೀಂಕೋರ್ಟ್ ನಿರ್ಧರಿಸಿದೆ. ಪನಾಮಗೇಟ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಧಾನಿ ಷರೀಫ್ ವಿರುದ್ಧ ತನಿಖೆ ನಡೆಸಲು ಜಂಟಿ ತಂಡವೊಂದನ್ನು(ಜೆಐಟಿ) ರಚಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ. ಐದು ಸದಸ್ಯರಿರುವ ಸುಪ್ರೀಂ ಪೀಠ 3-2 ಬಹುಮತದೊಂದಿಗೆ ಈ ತೀರ್ಪು ಬಂದಿದೆ.
ಏಳು ದಿನಗಳೊಳಗಾಗಿ ಜಂಟಿ ತನಿಖಾ ತಂಡದ ರಚನೆಯಾಗಬೇಕು; ಎರಡು ತಿಂಗಳಲ್ಲಿ ತನಿಖೆ ಮುಕ್ತಾಯಗೊಂಡು ವರದಿ ಸಲ್ಲಿಕೆಯಾಗಬೇಕು ಎಂದು ಸುಪ್ರಿಂಕೋರ್ಟ್ ನಿರ್ದೇಶನ ನೀಡಿದೆ. ಪಾಕಿಸ್ತಾನದ ಸೇನಾ ಗುಪ್ತಚರ ಸಂಸ್ಥೆ, ಐಎಸ್'ಐ ಕೂಡ ಈ ತನಿಖಾ ತಂಡದ ಭಾಗವಾಗಿರಲಿವೆ. ಪ್ರಧಾನಿ ಷರೀಫ್ ಮತ್ತವರ ಪುತ್ರರು ಜೆಐಟಿಯ ಮುಂದೆ ವಿಚಾರಣೆಗೆ ಹಾಜರಾಗಲೇಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಏನಿದು ಪನಾಮಾ ಪ್ರಕರಣ?
ನವಾಜ್ ಷರೀಫ್ ಕುಟುಂಬದವರು ವಿದೇಶದಲ್ಲಿ ಕಪ್ಪು ಹಣ ಇರಿಸಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಪನಾಮಾ ದೇಶದ ಮೊಸ್ಸಾಕ್ ಫೋನ್ಸೇಕಾ ಎಂಬ ಕಾನೂನು ಸೇವಾ ಸಂಸ್ಥೆಯ ಕೆಲ ಗುಪ್ತ ಕಡತಗಳು ಲೀಕ್ ಆಗಿದ್ದು, ಆ ಮೂಲಕ ಷರೀಫ್ ಕಪ್ಪುಹಣದ ವಿಚಾರ ಹೊರಬಿದ್ದಿದೆ. ಷರೀಫ್ ಅವರ ನಾಲ್ಕು ಮಕ್ಕಳಲ್ಲಿ ಮೂವರ ಹೆಸರಲ್ಲಿ ಕಪ್ಪುಹಣ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.