
ಒಬ್ಬರನ್ನು ಉಳಿಸುವುದಕ್ಕೆ ಹೊರಟ ಪ್ರಯಾಣವೊಂದು 7 ಜನರ ಸಾವಿನೊಂದಿಗೆ ಅಂತ್ಯವಾಗಿದೆ. ಹೌದು ನಿನ್ನೆ ಸಂಜೆ ನಡೆದ ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತಕ್ಕೂ ಮೊದಲು ಕುಟುಂಬವೊಂದು ತಮ್ಮ ಕುಟುಂಬದ ಬಹಳ ಅಮೂಲ್ಯವಾದ ವ್ಯಕ್ತಿಯ ಜೀವ ಉಳಿಸುವುದಕ್ಕೆ ವಿದೇಶದಲ್ಲೂ ಚಿಕಿತ್ಸೆ ನೀಡುವುದಕ್ಕೆ ಬಯಸಿ ಏಳು ಲಕ್ಷ ಸಾಲ ಮಾಡಿ ಏರ್ ಆಂಬುಲೆನ್ಸ್ ಬುಕ್ ಮಾಡಿತ್ತು. ಆದರೆ ವಿಧಿ ವಿಪರ್ಯಾಸವೋ ಏನೋ ಒಬ್ಬರ ಉಳಿಸಲು ಜಾರ್ಖಂಡ್‌ನಿಂದ ಆರಂಭಿಸಿದ ಈ ಪ್ರಯಾಣವೂ 7 ಜನರ ಸಾವಿನಲ್ಲಿ ಅಂತ್ಯವಾಗಿದೆ.
ನಿನ್ನೆ ಸಂಜೆ ನಡೆದ ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತದ ಹಿಂದಿನ ಮನ ಮಿಡಿಯುವ ಕತೆ ಇದು. ಬೆಂಕಿಯಿಂದ ಶೇಕಡಾ 60ರಷ್ಟು ಸುಟ್ಟು ಹೋಗಿದ್ದ ಸಂಜಯ್ ಕುಮಾರ್ ಶಾ ಅವರನ್ನು ಉಳಿಸಿಕೊಳ್ಳುವುದಕ್ಕೆ ಅವರ ಕುಟುಂಬ ಏನೂ ಮಾಡಬೇಕೋ ಅದೆಲ್ಲವನ್ನೂ ಮಾಡುವುದಕ್ಕೆ ಸಿದ್ದವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು ನೋಡಿ, ಅವರನ್ನು ಉಳಿಸುವ ಈ ಪಯಣದಲ್ಲಿ ಅವರ ಪತ್ನಿ ಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್ ಕೂಡ ಪ್ರಾಣ ಬಿಟ್ಟಿದ್ದಾರೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ಸಂಜೆ 7.11 ಕ್ಕೆ ಹೊರಟಿತು. ಸುಮಾರು 20 ನಿಮಿಷಗಳ ನಂತರ ರಾಡಾರ್ ಜೊತೆ ಇದು ಸಂಪರ್ಕ ಕಳೆದುಕೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಚತ್ರಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತು.
ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಚಂದ್ವಾದಲ್ಲಿ ಸಂಜಯ್ ಕುಮಾರ್ ಶಾ ಹೋಟೆಲ್ ನಡೆಸುತ್ತಿದ್ದರು. ಕಳೆದ ಸೋಮವಾರ, ಅವರ ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಸಂಜಯ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಅವರಿಗೆ ಶೇ. 65 ರಷ್ಟು ಸುಟ್ಟ ಗಾಯಗಳಾಗಿದ್ದವು. ಅವರಿಗೆ ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸ್ಥಿತಿ ಸುಧಾರಿಸದಿದ್ದಾಗ, ವೈದ್ಯರು ಅವರನ್ನು ದೆಹಲಿಯ ಪ್ರತಿಷ್ಠಿತ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.
ಸಂಜಯ್ ಅವರ ಹದಗೆಟ್ಟ ಆರೋಗ್ಯ ಈ ಸ್ಥಿತಿಯಿಂದಾಗಿ ರಸ್ತೆ ಅವರನ್ನು ರಸ್ತೆ ಮೂಲಕ ಕರೆದೊಯ್ಯಲು ಸಾಧ್ಯವಿರಲಿಲ್ಲ. ಹೀಗಾಗಿ ಅವರ ಕುಟುಂಬವು ಸಂಬಂಧಿಕರನ್ನು ಸಂಪರ್ಕಿಸಿ ಏರ್ ಆಂಬ್ಯುಲೆನ್ಸ್‌ಗಾಗಿ 7.5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ದೆಹಲಿಯಲ್ಲಿ ಅವರ ಚಿಕಿತ್ಸೆಗಾಗಿ ಸ್ವಲ್ಪ ಹಣವನ್ನು ಸಹ ಜೊತೆಗೆ ಇಟ್ಟುಕೊಂಡಿದ್ದರು. ಅಲ್ಲಿ ಸಂಜಯ್‌ಕುಮಾರ್ ಚೇತರಿಸಿಕೊಳ್ಳಬಹುದು ಎಂಬ ಭರವಸೆ ಕುಟುಂಬದ್ದಾಗಿತ್ತು. ಆದರೆ ಅವರ ಕುಟುಂಬದ ಕನಸಿನ ಜೊತೆ ಜೊತೆಗೆ ಒಬ್ಬರು ಯುವ ವೈದ್ಯ ಹಾಗೂ ಇಬ್ಬರು ಪೈಲಟ್‌ಗಳ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ: ಜಾರ್ಖಂಡ್ ದುರಂತದ ಬಳಿಕ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಹೆಲಿಕಾಪ್ಟರ್ ಪತನ
ಸಂಜಯ್ ಅವರ ಅಣ್ಣ ವಿಜಯ್ ಶಾ ಮಾತನಾಡಿ, ರಾಂಚಿ ವಿಮಾನ ನಿಲ್ದಾಣದಲ್ಲಿ ನಾವು ಅವರನ್ನು ಬೀಳ್ಕೊಡಲು ಹೋಗಿದ್ದೆವು. ಟಿವಿ ಸುದ್ದಿಗಳಿಂದ ಅಪಘಾತದ ಬಗ್ಗೆ ನಮಗೆ ತಿಳಿದಾಗ ನಾವು ಮನೆಗೆ ತಲುಪಿದ್ದೆವಷ್ಟೇ. ಎಲ್ಲವೂ ಒಂದು ಕ್ಷಣದಲ್ಲಿ ಕೊನೆಗೊಂಡಿತು ಎಂದು ದುಃಖಿಸಿದ್ದಾರೆ.
ಸಂಜಯ್ ಮತ್ತು ಅವರ ಪತ್ನಿ ಅರ್ಚನಾ ಇಬ್ಬರ ಸಾವಿಗೆ ಕಾರಣವಾದ ಈ ಅಪಘಾತವು ಅವರ ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ ಎಂದು ಕುಟುಂಬ ತಿಳಿಸಿದೆ. ರಾಂಚಿಯಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ, ಸಂಜಯ್ ಅವರನ್ನು ಎಂದಿಗೂ ವಿಮಾನದಲ್ಲಿ ಕರೆದೊಯ್ಯುವ ಅಗತ್ಯವಿರಲಿಲ್ಲ ಎಂದು ಅವರು ದೂರಿದರು.
ರಾಂಚಿಯಲ್ಲಿ ನನ್ನ ಭಾವ ಸಂಜಯ್‌ಗೆ ನಾವು ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಿದ್ದರೆ, ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು. ನಾನು ಸಂಜಯ್ ಮತ್ತು ನನ್ನ ಸಹೋದರಿ ಅರ್ಚನಾ ದೇವಿ ಇಬ್ಬರನ್ನೂ ಕಳೆದುಕೊಂಡೆ ಎಂದು ಅರ್ಚನಾ ದೇವಿ ಸೋದರ ಪಿಟಿಐಗೆ ತಿಳಿಸಿದ್ದಾರೆ. ಸಂಜಯ್ ಚಿಕಿತ್ಸೆ ಪಡೆಯುತ್ತಿದ್ದ ರಾಂಚಿಯ ದೇವಕಮಲ್ ಆಸ್ಪತ್ರೆಯ ಸಿಇಒ ಅನಂತ್ ಸಿನ್ಹಾ ಮಾತನಾಡಿ, ತಮ್ಮ ರೋಗಿಯೊಬ್ಬರು ಈ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರು ಎಂದು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡಾಗಿ ಹುಟ್ಟಿ ಅಪ್ಸರೆಯಾಗಿ ಬದಲಾದ: ಮೊದಲು ಹಾಗೂ ನಂತರದ ಫೊಟೋಗೆ ಶಾಕ್ ಆದ ನೆಟ್ಟಿಗರು
ಈ ದುರಂತದಲ್ಲಿ ತಮ್ಮ ಒಬ್ಬನೇ ಒಬ್ಬ ಮಗ ಡಾ. ವಿಕಾಸ್ ಕುಮಾರ್ ಗುಪ್ತಾ ಅವರನ್ನು ಕಳೆದುಕೊಂಡ ತಂದೆ ಬಜರಂಗಿ ಪ್ರಸಾದ್ ಅವರನ್ನು ಸಮಾಧಾನಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ತಮ್ಮ ಮಗನನ್ನು ವೈದ್ಯನನ್ನಾಗಿ ಮಾಡಲು ತಮ್ಮ ಎಲ್ಲಾ ಭೂಮಿಯನ್ನು ಮಾರಿದ್ದೆ. ಆತ ಅನೇಕರ ಜೀವ ಉಳಿಸಿದ. ಆದರೆ ಇಂದು ಅವನೇ ಹೊರಟು ಹೋದ. ರಾಂಚಿಯ ಸದರ್ ಆಸ್ಪತ್ರೆಯಲ್ಲಿ ಅವರ ನೇಮಕವಾಗಿತ್ತು. ಅವರಿಗೆ ಏಳು ವರ್ಷದ ಮಗನಿದ್ದಾನೆ. ಅವನು ಪ್ರತಿಭಾನ್ವಿತನಾಗಿದ್ದು, ಒಡಿಶಾದ ಕಟಕ್‌ನಲ್ಲಿ ಎಂಬಿಬಿಎಸ್ ಮುಗಿಸಿದ್ದ ಎಂದು ಕಣ್ಣೀರು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.