
ಬೆಂಗಳೂರು : ಕನ್ನಡನಾಡು, ನುಡಿ, ಜಲ, ಸಂಸ್ಕೃತಿ ಮತ್ತು ಸರ್ವಜನರ ಒಳಿತಿಗೆ ಮತ್ತು ಪ್ರಗತಿಗಾಗಿ ಶ್ರಮಿಸಲು ಪಕ್ಷ ಸಿದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ತಾಲೂಕಿನ ಬೊಮ್ಮಗಟ್ಟ ಗ್ರಾಮದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರು ಹಾಗೂ ರೈತರ ಸಮಾವೇಶದಲ್ಲಿ ಮಾತನಾಡಿದರು.
ಆಡಳಿತ ನಡೆಸುವವರಿಗೆ ತಾಯಿ ಹೃದಯವಿರಬೇಕು. ಜನಸಾಮಾನ್ಯರ ಸಂಕಷ್ಟಗಳನ್ನು ಆಲಿಸುವ ಕಿವಿ ಇರಬೇಕು. ಅವೆರಡೂ ನನಗಿವೆ. ನಮ್ಮನ್ನು ಬೆಂಬಲಿಸಿ ಎಂದು ಕೋರಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿವೆ. ಯುದ್ಧವಿಮಾನ ಖರೀದಿಯಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ನವರು ಮೋದಿ ಅವರ ಮೇಲೆ ಹರಿಹಾಯ್ದರೆ, ಶೇ.10 ಕಮಿಷನ್ ಲೆಕ್ಕ ಕೊಡಿ ಎಂದು ಮೋದಿ ಅವರು ಕರ್ನಾಟಕದ ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದಾರೆ. ಅವರಿಗೆ ಜನರ, ರೈತರ ಸಂಕಷ್ಟಗಳು ಕಾಣುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ 3600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಗಳಿಗೆ ಪ್ರಾಮಾಣಿಕ ಬೆಲೆ ಸಿಗದೆ ರೈತ ಕಂಗಾಲಾಗುತ್ತಿದ್ದಾನೆ. ಕೆಲ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಿ ಕಣ್ಣೊರೆಸುವ ಕೆಲಸ ಮತಬೇಟೆಗಾಗಿ ನಡೆಯುತ್ತಿದೆ. ಅವರಿಗೆ ಶಾಶ್ವತ ಪರಿಹಾರ ಎಂಬುದು ಸಿಗುತ್ತಿಲ್ಲ. ನನ್ನ ಪಕ್ಷ ಅಧಿಕಾರಕ್ಕೆ ಬಂದರೆ 24 ತಾಸಿನೊಳಗೆ ರಾಷ್ಟ್ರೀಕೃತ, ಗ್ರಾಮೀಣ, ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿನ ಅಂದಾಜು 51 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಇಸ್ರೇಲ್ ದೇಶದ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳಲು ರೈತರಿಗೆ ಕೃಷಿ ಬಗ್ಗೆ ತಿಳಿವಳಿಕೆ ಮೂಡಿ ಸುವ ಹೊಸ ಯೋಜನೆಗೆ ₹ ೨೫ ಸಾವಿರ ಕೋಟಿ ಹಣವನ್ನು ತೆಗೆದಿರಿಸಲಿದ್ದೇನೆ ಎಂದರು.
ಗ್ರಾಮೀಣ, ಪಟ್ಟಣ, ನಗರದ ನಿರುದ್ಯೋಗಿಗಳಿಗೆ ಉದ್ಯೋಗ, ರಾಜ್ಯದ ಕೆರೆಗಳ ಅಭಿವೃದ್ಧಿ ಮತ್ತು ನೀರಾವರಿ, ತಂತ್ರಜ್ಞಾನ ಬಳಕೆಗಾಗಿ ನೂತನ ಯೋಜನೆ ಗಳನ್ನು ಜಾರಿಗೆ ತರಲಿದ್ದೇನೆ ಎಂದರು. ಈ ಎಲ್ಲ ಯೋಜನೆಗಳನ್ನು ಜಾರಿಗೆ ತರಲು ಸಾವಿರಾರು ಕೋಟಿ ಹಣದ ಅವಶ್ಯಕತೆ ಇದೆ. ಅದನ್ನು ನನ್ನ ಮನೆಯಿಂದ ತರುತ್ತಿಲ್ಲ. ಆರೂವರೆ ಕೋಟಿ ಕನ್ನಡಿಗರು ಕಟ್ಟುತ್ತಿರುವ ತೆರಿಗೆ ರೂಪದ ಹಣ ₹ ೨ ಸಾವಿರ ಕೋಟಿ ಮೊತ್ತದಲ್ಲಿ ಪ್ರತಿವರ್ಷ ಸಂಗ್ರಹವಾಗುತ್ತಿದೆ ಎಂಬುದು ತಿಳಿದಿರಲಿ ಎಂದರು. ಕೆಲವು ವರ್ಷಗಳ ಹಿಂದೆ ಗಣಿ ಮಣ್ಣು ಮಾರಾಟದಿಂದ ಕೆಲವೇ ಕೆಲವು ಮಂದಿ ಹಣವಂತರಾದರೂ ಜನರು ಮಾತ್ರ ಬರೀ ಧೂಳನ್ನು ಕುಡಿಯಬೇಕಾದ ಪರಿಸ್ಥಿತಿ ಬಂತು. ಈಗೀಗ ಅರಣ್ಯ ಚಿಗುರುತ್ತಿದೆ. ಆದರೆ ಗಣಿಬಾಧಿತ ಜನರ ಬದುಕು ಬದಲಾಗಿಲ್ಲ ಒಣ ಪ್ರತಿಷ್ಠೆಗಾಗಿ ಕೆಲವರು ಬಳ್ಳಾರಿ ಜಿಲ್ಲೆಯಲ್ಲಿ ಸಾಮೂಹಿಕ ಮದುವೆ ಮೂಲಕ ಜನರ ಬಡತನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.