ರಾಜ್ಯಸಭೆ ಚುನಾವಣೆ: ಎಲ್ಲ 37 ಶಾಸಕರಿಗೆ ಜೆಡಿಎಸ್‌ ವಿಪ್‌ ಜಾರಿ

By Suvarna Web DeskFirst Published Mar 20, 2018, 9:17 AM IST
Highlights

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಏಳು ಬಂಡಾಯ ಶಾಸಕರು ಸೇರಿದಂತೆ 37 ಶಾಸಕರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಿಪ್‌ ಜಾರಿ ಮಾಡಿದ್ದಾರೆ.

ಬೆಂಗಳೂರು : ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಏಳು ಬಂಡಾಯ ಶಾಸಕರು ಸೇರಿದಂತೆ 37 ಶಾಸಕರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಿಪ್‌ ಜಾರಿ ಮಾಡಿದ್ದಾರೆ.

ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್‌ ಪರ ತಮ್ಮ ಮೊದಲ ಪ್ರಾಶಸ್ತ್ಯದ ಮತ ಚಲಾಯಿಸಬೇಕು ಎಂದು ವಿಪ್‌ ನೀಡಿದ್ದಾರೆ. ಮಾ.23ರಂದು ಚುನಾವಣೆ ನಡೆಯಲಿದ್ದು, ಜೆಡಿಎಸ್‌ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್‌ ಅವರನ್ನು ಕಣಕ್ಕಿಳಿಸಿದೆ. ಬಂಡಾಯ ಶಾಸಕರು, ಪಕ್ಷೇತರ ಶಾಸಕರು ಮತ್ತು ಇತರೆ ಶಾಸಕರ ಬೆಂಬಲದೊಂದಿಗೆ ತಮ್ಮ ಬೆಂಬಲದೊಂದಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಅಖಾಡಕ್ಕಿಳಿಸಿದೆ. ಈ ಹಿಂದೆಯೂ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ವಿಪ್‌ ಉಲ್ಲಂಘಿಸಿ ಏಳು ಮಂದಿ ಜೆಡಿಎಸ್‌ ಬಂಡಾಯ ಶಾಸಕರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಪರಿಣಾಮ ಪಕ್ಷದ ಅಭ್ಯರ್ಥಿಯಾಗಿದ್ದ ಫಾರೂಕ್‌ ಸೋಲು ಅನುಭವಿಸಬೇಕಾಯಿತು.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಒಂದು ಸ್ಥಾನ ಗೆಲ್ಲಲಿದೆ. ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಸುಲಭವಾಗಿ ಜಯಗಳಿಸಿ ರಾಜ್ಯಸಭೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದಾರೆ. ಕಾಂಗ್ರೆಸ್‌ನ ಮೊದಲ ಎರಡು ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಮೂರನೇ ಅಭ್ಯರ್ಥಿಯನ್ನು ಪಕ್ಷದ ಹೆಚ್ಚುವರಿ ಮತಗಳು ಹಾಗೂ ಜೆಡಿಎಸ್‌ ಬಂಡಾಯ ಶಾಸಕರ ಮತಗಳ ಬೆಂಬಲದೊಂದಿಗೆ ಗೆಲ್ಲಿಸುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ.

ಆದರೂ, ಜೆಡಿಎಸ್‌ ಪೈಪೋಟಿ ನೀಡಿದ್ದು, ನಾಲ್ಕನೇ ಸ್ಥಾನಕ್ಕೆ ಜೆಡಿಎಸ್‌-ಕಾಂಗ್ರೆಸ್‌ ನಡುವೆ ಸ್ಪರ್ಧೆ ನಡೆಯಲಿದೆ. ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯೋ ಅಥವಾ ಜೆಡಿಎಸ್‌ ಅಭ್ಯರ್ಥಿಯೋ ಎಂಬುದು ಕುತೂಹಲ ಮೂಡಿದೆ. ಈ ನಡುವೆ, ಜೆಡಿಎಸ್‌ ವರಿಷ್ಠರು ಬಂಡಾಯ ಶಾಸಕರ ಕೈಯನ್ನು ಕಾನೂನಿನ ಮೂಲಕ ಕಟ್ಟಿಹಾಕಲು ಮುಂದಾಗಿದ್ದಾರೆ.

click me!