ಸರ್ಕಾರದ ಉಳಿವಿನ ಬಗ್ಗೆ ಗೌಡ್ರಿಗೆ ಅನುಮಾನ!

By Web DeskFirst Published Oct 12, 2018, 8:53 AM IST
Highlights

ಸರ್ಕಾರದ ಉಳಿವಿನ ಬಗ್ಗೆ ಗೌಡ ಅನುಮಾನ! ಪರ್ಯಾಯ ಶಕ್ತಿ ಯಶಸ್ವಿಯಾಗುವುದು ಅನುಮಾನವಿದೆ: ದೇವೇಗೌಡ | ಹಾಗಂತ ನಿರಾಶಾವಾದಿಯಾಗುವುದು ಬೇಡ, ಆಶಾವಾದಿಯಾಗೋಣ
 

ಬೆಂಗಳೂರು (ಅ. 12):  ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸುವಾಗ ಪರ್ಯಾಯ ಶಕ್ತಿ ಕಟ್ಟುವ ಉದ್ದೇಶದಿಂದ ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳನ್ನು ಹೊರತುಪಡಿಸಿ ಹಲವು ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಗೆ ತರಲಾಯಿತು. ಇಂದಿನ ವಿದ್ಯಮಾನಗಳನ್ನು ನೋಡಿದಾಗ ಈ ಪರ್ಯಾಯ ಶಕ್ತಿ ಯಶಸ್ವಿಯಾಗುವುದು ಅನುಮಾನವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಬಯಲು ಪರಿಷತ್‌ ಮತ್ತು ಭಾರತಯಾತ್ರಾ ಕೇಂದ್ರದ ಸಹಯೋಗದಲ್ಲಿ ಗುರುವಾರ ಚಿತ್ರಕಲಾ ಪರಿಷತ್ತಿನಲ್ಲಿ ಮಹಾತ್ಮ ಗಾಂಧಿ 150 ಮತ್ತು ಲೋಕನಾಯಕ ಜೆ.ಪಿ.ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಇಂದಿನ ವ್ಯವಸ್ಥೆ-ಅವಸ್ಥೆ’ ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಯಪ್ರಕಾಶ ನಾರಾಯಣ ಅವರು ಈ ದೇಶದಲ್ಲಿ ಪರ್ಯಾಯ ಶಕ್ತಿ ಹುಟ್ಟಿಗೆ ಅಪಾರ ಕೊಡುಗೆ ನೀಡಿದ್ದರು. ಇಂದು ನಾವೆಲ್ಲ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇವೆ. ಇಂದಿನ ವ್ಯವಸ್ಥೆಯ ವಿರುದ್ಧ ಪರ್ಯಾಯ ಶಕ್ತಿ ಕಟ್ಟುವುದು ಅಷ್ಟುಸುಲಭವಲ್ಲ. ಕಟ್ಟಿದರೂ ಅದು ಯಶಸ್ವಿಯಾಗುವುದು ಅನುಮಾನ. ಹಾಗೆಂದು ಪರ್ಯಾಯ ಶಕ್ತಿ ಕಟ್ಟುವ ವಿಚಾರದಲ್ಲಿ ನಿರಾಶಾವಾದಿಗಳಾಗುವುದು ಬೇಡ. ಆಶಾವಾದ ಇರಿಸಿಕೊಳ್ಳೋಣ ಎಂದರು.

ಜೆ.ಪಿ.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ರಾಜಕೀಯ ಪಕ್ಷಗಳು, ಶಾಸಕರು, ಸರ್ಕಾರ ಹೇಗಿರಬೇಕೆಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಹಾಗಾಗಿ ಆಯಾ ಪಕ್ಷಗಳು ತಮ್ಮ ಪಕ್ಷದ ಶಾಸಕರಿಗೆ ಗಾಂಧಿ ಕುರಿತ ಪುಸ್ತಕಗಳನ್ನು ನೀಡಬೇಕು ಎಂದರು.

ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲು ಅವಕಾಶ ನೀಡಬೇಕು. ಬಿ.ಎಸ್‌.ಯಡಿಯೂರಪ್ಪ ಅವರು ಪ್ರತಿಪಕ್ಷದ ನಾಯಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅಧಿಕಾರ ಸಿಕ್ಕಾಗ ಸರಿಯಾಗಿ ಬಳಸಿಕೊಳ್ಳಲಿಲ್ಲ. ಇನ್ನಾದರೂ ಸಮ್ಮಿಶ್ರ ಸರ್ಕಾರಕ್ಕೆ ಕಾಟ ಕೊಡುವುದನ್ನು ನಿಲ್ಲಿಸಬೇಕು ಎಂದು ದೊರೆಸ್ವಾಮಿ ಸಲಹೆ ನೀಡಿದರು.

 

click me!