DLFನಿಂದ 7000 ಕೋಟಿ ಮೌಲ್ಯದ ಭೂಮಿ ಕಬಳಿಕೆ-ಸೋನಿಯಾ ಅಳಿಯನ ವಿರುದ್ಧ ದೂರು

By Web DeskFirst Published Oct 12, 2018, 8:52 AM IST
Highlights

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ದ ಮತ್ತೊಂದು ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಈ ಬಾರಿ 7,000 ರೂಪಾಯಿ ಕೋಟಿ ಮೌಲ್ಯದ ಭೂಕಬಳಿಕೆ ಆರೋಪ ಎದುರಾಗಿದೆ. ಬೆಂಗಳೂರಿನಲ್ಲೇ 1,100 ಏಕರೆ ಜಮೀನ್ ಕಬಳಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಬೆಂಗಳೂರು(ಅ.12):  ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಯು ನಗರದಲ್ಲಿ ₹7000 ಕೋಟಿ ಮೌಲ್ಯದ 1,100 ಎಕರೆ ಸರ್ಕಾರಿ ಜಮೀನು ಕಬಳಿಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್. ಆರ್.ರಮೇಶ್ ಅವರು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಲೋಕಾಯುಕ್ತ, ಬಿಎಂಟಿಎಫ್‌ನಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಹಗರಣ ನಡೆದಿರುವ ಹಿನ್ನೆಲೆಯಲ್ಲಿ ರಾಬರ್ಟ್ ವಾದ್ರಾ ಜತೆಗೆ ಅವ್ಯವಹಾರಕ್ಕೆ ಸಹಕರಿಸಿರುವ ಆರೋಪದ ಮೇರೆಗೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್, ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧವು ದೂರು ನೀಡಲಾಗಿದೆ. ಸರ್ಕಾರಿ ಭೂ ಕಬಳಿಕೆ,
ನಕಲಿ ದಾಖಲೆ ತಯಾರಿಕೆ, ವಂಚನೆ, ಅಧಿಕಾರ ದುರುಪ ಯೋಗ, ಸರ್ಕಾರಿ ಭೂ ಕಬಳಿಕೆಗೆ ಸಹಕಾರ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಹಗರಣಕ್ಕೆ ಸಂಬಂಧಿಸಿ ದಂತೆ ಸುಮಾರು 487 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ವರ್ತೂರು, ಗಂಗೇನಹಳ್ಳಿ, ನರಸೀಪುರ ಮತ್ತು ಪೆದ್ದನಹಳ್ಳಿ ಗ್ರಾಮದಲ್ಲಿ 1100 ಎಕರೆ ಸರ್ಕಾರಿ ಜಮೀನನ್ನು ಡಿಎಲ್‌ಎಫ್
ಸಂಸ್ಥೆಯು ಕಬಳಿಸಿದೆ. ದೇಶದಲ್ಲಿಯೇ ದೊಡ್ಡ ಭೂಹಗರಣ ವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಯು ಸರ್ಕಾರಿ ಸ್ವತ್ತುಗಳಿಗೆ ನಕಲಿ ಮ್ಯುಟೇಷನ್ ನೋಂದಣಿಗಳನ್ನು ಸೃಷ್ಟಿಸಿ ಕೊಟ್ಟಿರುವ ನಾಲ್ಕು ಗ್ರಾಮಗಳ
ಗ್ರಾಮ ಲೆಕ್ಕಿಗರು, ಬೆಂಗಳುರು ದಕ್ಷಿಣ ತಾಲೂಕಿನ ತಹಸೀಲ್ದಾರ್‌ಗಳಾಗಿದ್ದ ಬಿ.ಆರ್. ದಯಾನಂದ್, ವಿ.ಮುನಿಯ ಪ್ಪ, ಬಿ.ಕೆ.ಮಮತಾ, ಎಸ್.ಎಂ.ಶಿವಕುಮಾರ್, ಉಪ
ತಹಸೀಲ್ದಾರ್‌ಗಳು, ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ ಸೇರಿದಂತೆ ಇತರೆ ಅಧಿಕಾರಿಗಳು ಹಗರಣದಲ್ಲಿಭಾಗಿಯಾಗಿದ್ದಾರೆ ಎಂದು ದೂರಿದರು.

click me!