ಸಂಪುಟ ವಿಸ್ತರಣೆ ವೇಳೆ ಜೆಡಿಎಸ್ ಗೆ ವಾಸ್ತು ಎಫೆಕ್ಟ್ : ತುಂಬದ 2 ಸಚಿವ ಸ್ಥಾನ

By Web DeskFirst Published Dec 23, 2018, 9:27 AM IST
Highlights

ಮೈತ್ರಿ ಸರ್ಕಾರದಲ್ಲಿ 2ನೇ ಹಂತದ ಸಚಿವ ಸಂಪುಟ ಕಾಂಗ್ರೆಸ್ ಗೆ ಮಾತ್ರವೇ ಸೀಮಿತವಾಗಿದೆ. ಜೆಡಿಎಸ್ ನಲ್ಲಿ ಬಾಕಿ ಇರುವ 2 ಸ್ಥಾನಗಳು ಇನ್ನೂ ಕೂಡ ಭರ್ತಿಯಾಗಿಲ್ಲ. ಇದಕ್ಕೆ ಕಾರಣ ವಾಸ್ತು ಎಫೆಕ್ಟ್ 

ಬೆಂಗಳೂರು :  ಮೈತ್ರಿ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪದಗ್ರಹಣ ಮಾಡಿದವರ ಮೊಗದಲ್ಲಿ ಸಂಭ್ರಮ ಮನೆ ಮಾಡಿದರೆ, ಜೆಡಿಎಸ್‌ ಪಾಳೆಯದಲ್ಲಿ ಒಳಬೇಗುದಿ ಶುರುವಾಗಿದೆ. ಪಕ್ಷಕ್ಕೆ ಲಭ್ಯ ಇರುವ ಎರಡು ಸಚಿವ ಸ್ಥಾನ ಮತ್ತು ನಿಗಮ-ಮಂಡಳಿಗಳನ್ನು ಯಾರಿಗೂ ನೀಡದಿರುವುದು ಆಕಾಂಕ್ಷಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.

ಎರಡನೇ ಹಂತದಲ್ಲಿ ಕಾಂಗ್ರೆಸ್‌ಗೆ ಲಭ್ಯ ಇದ್ದ ಎಂಟು ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಜೆಡಿಎಸ್‌ನ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ. ಮೂರನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್‌ನಲ್ಲಿ ಖಾಲಿ ಇರುವ ಸಚಿವ ಸ್ಥಾನ ಮತ್ತು ನಿಗಮ​-ಮಂಡಳಿಗಳನ್ನು ತುಂಬುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಸಂಕ್ರಾಂತಿ ಬಳಿಕ ಮೂರನೇ ಹಂತದ ಸಚಿವ ಸಂಪುಟ ವಿಸ್ತರಣೆ ನಡೆಸುವ ಯೋಚನೆ ಜೆಡಿಎಸ್‌ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬವು ಅಪಾರ ದೈವಭಕ್ತಿಯುಳ್ಳದ್ದಾಗಿದ್ದು, ಧನುರ್ಮಾಸವು ಸಂಕ್ರಾಂತಿ ಹಬ್ಬಕ್ಕೆ ಮುಕ್ತಾಯವಾಗಲಿದೆ. ಧನುರ್ಮಾಸದ ಬಳಿಕ ಜೆಡಿಎಸ್‌ ಶಾಸಕರಿಗೆ ಸಚಿವ ಸ್ಥಾನ ಮತ್ತು ನಿಗಮ-ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಸಚಿವ ಎಚ್‌.ಡಿ.ರೇವಣ್ಣ ಪೂಜೆ-ಪುನಸ್ಕಾರ, ಕಾಲಗಳಲ್ಲಿ ಅಪಾರ ಪ್ರಮಾಣದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಧನುರ್ಮಾಸ ಒಳ್ಳೆಯ ಸಮಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಜೆಡಿಎಸ್‌ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬೇಡ ಎಂಬ ಸೂಚನೆ ನೀಡಿದ್ದರು. ಹೀಗಾಗಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಜತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ ಎಂದು ಪಕ್ಷದ ನಾಯಕರೊಬ್ಬರ ಅಭಿಪ್ರಾಯವಾಗಿದೆ.

ಕಾಂಗ್ರೆಸ್‌ ಖಾಲಿ ಇದ್ದ ಎಂಟು ಸ್ಥಾನಗಳನ್ನು ಎರಡನೇ ಹಂತದಲ್ಲಿ ಭರ್ತಿ ಮಾಡಿದಂತೆ ಜೆಡಿಎಸ್‌ ವರಿಷ್ಠರು ಪಕ್ಷದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡಬೇಕಿತ್ತು. ಅಲ್ಲದೇ, ನಿಗಮ-ಮಂಡಳಿಗಳ ನೇಮಕವನ್ನು ಸಹ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಅದು ಮಾಡದಿರುವುದು ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಿಸಬೇಕಾಗಿದೆ. ಈ ವೇಳೆ ಪಕ್ಷದ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಹೊಸ ಚೈತ್ಯನ್ಯ ತುಂಬಬೇಕಿದೆ. ಸಚಿವ ಸ್ಥಾನ ಮತ್ತು ನಿಗಮ-ಮಂಡಳಿಗಳ ನೇಮಕ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡಲು ಸಹಕಾರಿಯಾಗುತ್ತಿತ್ತು ಎಂಬ ಅಭಿಪ್ರಾಯಗಳು ಪಕ್ಷದಲ್ಲಿ ವ್ಯಕ್ತವಾಗಿವೆ.

ವಿಧಾನ ಪರಿಷತ್‌ನ ಸಭಾಪತಿ ಸ್ಥಾನವು ಜೆಡಿಎಸ್‌ನಿಂದ ಕೈ ತಪ್ಪಿದರೂ ಪಕ್ಷದ ವರಿಷ್ಠರು ಹೆಚ್ಚಿನ ತಲೆ ಕೆಡಿಸಿಕೊಳ್ಳಲಿಲ್ಲ ಮತ್ತು ಉಪಸಭಾಪತಿ ಸ್ಥಾನವು ಧರ್ಮೇಗೌಡ ಅವರಿಗೆ ನೀಡಿರುವುದಕ್ಕೆ ಪಕ್ಷದಲ್ಲಿಯೇ ತೀವ್ರ ಅಸಮಾಧಾನ ಇದೆ. ಇದೀಗ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಪಕ್ಷದ ನಾಯಕರಿಗೆ ಮಣೆ ಹಾಕಿಲ್ಲ. ಪಕ್ಷದ ವರಿಷ್ಠರ ಇತ್ತೀಚೆಗಿನ ನಡೆಯ ಬಗ್ಗೆ ಒಳಬೇಗುದಿ ಶುರುವಾಗಿದೆ. ಆದರೆ, ಅದನ್ನು ಹೊರಹಾಕುವಂತಹ ಪರಿಸ್ಥಿತಿ ಪಕ್ಷದ ನಾಯಕರಿಲ್ಲ. ತೋರಿ​ಕೆ​ಗಾಗಿ ಮಾತ್ರ ಪಕ್ಷವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವ ಅನುಮಾನವು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಮೂಡಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯು ಡಿ.22ರಂದು ಖಚಿತ ಎಂದು ಘೋಷಣೆ ಮಾಡುತ್ತಿದ್ದಂತೆ ಪಕ್ಷದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾದವು. ಆದರೆ, ಜೆಡಿಎಸ್‌ನಲ್ಲಿ ಮಾತ್ರ ಇಂತಹ ಯಾವುದೇ ಚಟುವಟಿಕೆಗಳು ಕಾಣಲಿಲ್ಲ. ಬೆಳಗಾವಿಯಲ್ಲಿ ಜೆಡಿಎಸ್‌ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿತ್ತಾದರೂ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಭೆಗೆ ಹೋಗುವಷ್ಟರಲ್ಲಿ ತಡರಾತ್ರಿಯಾಗಿತ್ತು. 

ಹೀಗಾಗಿ ಸಭೆಯು ಕೇವಲ ಭೋಜನಕ್ಕೆ ಸೀಮಿತವಾಯಿತೇ ಹೊರತು ಯಾವುದೇ ಚರ್ಚೆಗಳು ನಡೆಯಲಿಲ್ಲ. ಸಭೆಯಲ್ಲಿ ಸಚಿವ ಸ್ಥಾನ ಮತ್ತು ನಿಗಮ-ಮಂಡಳಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಬೇಕು ಎಂಬ ಉತ್ಸುಕತೆಯಲ್ಲಿ ಜೆಡಿಎಸ್‌ ಶಾಸಕರು, ನಾಯಕರಿದ್ದರು. ಆದರೆ, ಸುವರ್ಣ ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆ ಸೇರಿದಂತೆ ಇತರೆ ಸಭೆಗಳು ಇದ್ದ ಕಾರಣ ತಡರಾತ್ರಿ ಹೋಗಿದ್ದರು. ಅಷ್ಟೊತ್ತಿಗೆ ಹಲವು ಶಾಸಕರು ಹಿಂತಿರುಗಿದ್ದರು. ಯಾವುದೇ ಚರ್ಚೆಯಾಗಲಿಲ್ಲ. ಇದು ಸಹ ಜೆಡಿಎಸ್‌ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗಲು ಕಾರಣ ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬಂದಿವೆ.

click me!