
ಬೆಂಗಳೂರು[ಡಿ.23]: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸ ಎಂಟು ಸಚಿವರು ಸೇರ್ಪಡೆಯಾದ ಬಳಿಕವೂ ಇನ್ನೂ 10 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಕಾಂಗ್ರೆಸ್ನ ಅತೃಪ್ತ ಶಾಸಕರು ಆರೋಪಿಸುತ್ತಾರೆ.
ರಾಜಧಾನಿ ಬೆಂಗಳೂರು, ತುಮಕೂರು, ಬೀದರ್, ವಿಜಯಪುರದಂತಹ ಜಿಲ್ಲೆಗಳಿಗೆ ಮೂರು ಸಚಿವರು ಇದ್ದರೆ, ರಾಮನಗರ, ಮಂಡ್ಯದಂತಹ ಜಿಲ್ಲೆಗಳಿಗೆ ತಲಾ ಎರಡೆರಡು ಸಚಿವ ಸ್ಥಾನ ನೀಡಲಾಗಿದೆ. ಆದರೆ, ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಗೆ ಒಬ್ಬ ಸಚಿವರೂ ಇಲ್ಲ ಎಂದು ಅವರು ಆರೋಪಿಸುತ್ತಾರೆ.
ಕಳೆದ ಜೂನ್‌ನಲ್ಲಿ ನಡೆದಿದ್ದ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ 16 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿತ್ತು. ಉಳಿದ 14 ಜಿಲ್ಲೆಗಳಲ್ಲಿ ಒಬ್ಬರೂ ಸಚಿವರಾಗಿರಲಿಲ್ಲ. ಇದೀಗ ಶನಿವಾರ ನಡೆದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ವಂಚಿತ ಜಿಲ್ಲೆಗಳ ಪೈಕಿ ಹೊಸ ಮೂರು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿದ್ದು, ಒಂದು ಜಿಲ್ಲೆ ಸಚಿವ ಸ್ಥಾನ ಕಳೆದುಕೊಂಡಿದೆ. ಇನ್ನು ಜಾರಕಿಹೊಳಿ ಸಹೋದರರಲ್ಲಿ ಸಚಿವ ಸ್ಥಾನ ಬದಲಾವಣೆ ಮೂಲಕ ಬೆಳಗಾವಿಗೆ ದೊರೆತಿದ್ದ ಪ್ರಾತಿನಿಧ್ಯ ಹಾಗೇ ಉಳಿದುಕೊಂಡಂತಾಗಿದೆ.
ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್, ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಮತ್ತು ಹೂವಿನಹಡಗಲಿ ಶಾಸಕ ಪರಮೇಶ್ವರ್ ನಾಯಕ್, ಸಂಡೂರು ಶಾಸಕ ಇ.ತುಕಾರಾಂ ಮತ್ತು ಬಾಗಲಕೋಟೆ ಮೂಲದ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಅವರ ಸಚಿವ ಸಂಪುಟ ಸೇರ್ಪಡೆ ಮೂಲಕ ಬೆಂಗಳೂರು ಗ್ರಾಮಾಂತರ, ಧಾರವಾಡ, ಬಾಗಲಕೋಟೆ ಮತ್ತು ಬಳ್ಳಾರಿ ಈ ನಾಲ್ಕು ಜಿಲ್ಲೆಗಳಿಗೆ ಹೊಸದಾಗಿ ಪ್ರಾತಿನಿಧ್ಯ ದೊರೆತಂತಾಗಿದೆ. ಆದರೆ, ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರಿಂದ ಹಾವೇರಿ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿದೆ
ಉಳಿದಂತೆ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಅವರ ಸಚಿವ ಸಂಪುಟ ಸೇರ್ಪಡೆಯಿಂದ ವಿಜಯಪುರಕ್ಕೆ ಈಗಾಗಲೇ ಇದ್ದ ಎರಡು ಸಚಿವ ಸ್ಥಾನಗಳು ಸೇರಿ ಒಟ್ಟು ಮೂರು ಸಚಿವ ಸ್ಥಾನ ಲಭಿಸಿದಂತಾಗಿದೆ. ಇನ್ನು, ಬೀದರ್ ಜಿಲ್ಲೆಗೆ ಈಗಾಗಲೇ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಈಗ ಶಾಸಕ ರಹೀಂ ಖಾನ್ ಸಂಪುಟ ಸೇರ್ಪಡೆಯೊಂದಿಗೆ ಜಿಲ್ಲೆಗೆ ಇನ್ನೂ ಒಂದು ಹೆಚ್ಚುವರಿ ಸ್ಥಾನ ದೊರೆತಂತಾಗಿದೆ.
ಪ್ರಾತಿನಿಧ್ಯ ಸಿಗದ 10 ಜಿಲ್ಲೆಗಳು:
ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ಹಾವೇರಿ (ಪ್ರಾತಿನಿಧ್ಯ ಕಳೆದುಕೊಂಡ ಜಿಲ್ಲೆ) ಜಿಲ್ಲೆಗಳ ಯಾವುದೇ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.
5 ಜಾತಿಗಳಿಗೆ 2 ಸಚಿವ ಸ್ಥಾನ
ಇನ್ನು ಜಾತಿವಾರು ಲೆಕ್ಕಾಚಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಲಿಂಗಾಯತ, ಕುರುಬ, ಅಲ್ಪಸಂಖ್ಯಾತ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯಗಳಿಗೆ ಎರಡು ಸಚಿವ ಸ್ಥಾನಗಳು ಹೆಚ್ಚುವರಿಯಾಗಿ ಸಿಕ್ಕಂತಾಗಿದೆ.
ಪ್ರಸ್ತುತ ಸಂಪುಟದಲ್ಲಿರುವ ಇಬ್ಬರು ಕುರುಬ ಸಚಿವರ ಪೈಕಿ ಆರ್.ಶಂಕರ್ ಅವರನ್ನು ಕೈಬಿಟ್ಟು, ಸಿ.ಎಸ್.ಶಿವಳ್ಳಿ ಮತ್ತು ಎಂ.ಟಿ.ಬಿ.ನಾಗರಾಜ್ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದರಿಂದ ಕುರುಬ ಸಮುದಾಯಕ್ಕೆ ಒಟ್ಟು ಮೂರು ಸಚಿವ ಸ್ಥಾನ ದೊರೆತಿದೆ. ಪರಿಶಿಷ್ಟಪಂಗಡದ ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು, ಸತೀಶ್ ಜಾರಕಿಹೊಳಿ ಮತ್ತು ಇ.ತುಕಾರಾಂ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರಿಂದ ನಾಯಕ ಜನಾಂಗಕ್ಕೆ ಒಂದು ಹೆಚ್ಚುವರಿ ಸ್ಥಾನ ದೊರೆತಿದೆ. ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್, ಅಲ್ಪಸಂಖ್ಯಾತರಿಂದ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರಿಂದ ಒಟ್ಟು ಲಿಂಗಾಯತ ಸಚಿವರ ಸಂಖ್ಯೆ ಐದಕ್ಕೆ, ಅಲ್ಪಸಂಖ್ಯಾತ ಸಚಿವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಇನ್ನು, ಕೊಳ್ಳೇಗಾಲದ ಬಿಎಸ್‌ಪಿ ಶಾಸಕ ಎನ್.ಮಹೇಶ್ ಸಚಿವ ಸ್ಥಾನ ತೊರೆದಿದ್ದರಿಂದ ದಲಿತರಿಗೆ ಒಂದು ಸಚಿವ ಸ್ಥಾನ ಕಡಿಮೆಯಾಗಿತ್ತು. ಇದೀಗ ಲಂಬಾಣಿ ಸಮುದಾಯದ ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಪರಿಶಿಷ್ಟಜಾತಿಯ (ಎಡಗೈ) ಆರ್.ಬಿ.ತಿಮ್ಮಾಪುರ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆತಿದ್ದರಿಂದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಪ್ರಿಯಾಂಕ ಖರ್ಗೆ, ವೆಂಕಟರಮಣಪ್ಪ ಸೇರಿ ದಲಿತ ಸಮುದಾಯಕ್ಕೆ ಒಟ್ಟು ಐದು ಸಚಿವ ಸ್ಥಾನ ದೊರೆತಂತಾಗಿದೆ. ಎಡಗೈ ಸಮುದಾಯಕ್ಕೂ ಪ್ರಾತಿನಿಧ್ಯ ಸಿಕ್ಕಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ