ಅಳೆದು - ತೂಗಿ ಬಿಜೆಪಿ ‘ಆಪರೇಷನ್‌’ : ಯಾರಿಗೆ ಗಾಳ..?

Published : Dec 23, 2018, 09:07 AM IST
ಅಳೆದು - ತೂಗಿ ಬಿಜೆಪಿ ‘ಆಪರೇಷನ್‌’ : ಯಾರಿಗೆ ಗಾಳ..?

ಸಾರಾಂಶ

ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಅನೇಕರಲ್ಲಿ ಅಸಮಾಧಾನದ ಹೊಗೆ ಭುಗಿಲೇಳುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಅಳೆದು ತೂಗಿ ಆಪರೇಷನ್ ಕಮಲದತ್ತ ಮನಸ್ಸು ಮಾಡಿದೆ. 

ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಭುಗಿಲೇಳುವ ಅಸಮಾಧಾನದ ಲಾಭ ಪಡೆದುಕೊಳ್ಳಲು ಲೆಕ್ಕಾಚಾರ ಹಾಕುತ್ತಿರುವ ಬಿಜೆಪಿ, ಈಗ ಕೈ ಪಾಳೆಯದ ಅತೃಪ್ತ ಶಾಸಕರಿಗೆ ಗಾಳ ಹಾಕಲು ಸೂಕ್ತ ಸಮಯಕ್ಕಾಗಿ ಕಾದು ನೋಡುತ್ತಿದೆ.

ಮೈತ್ರಿ ಸರ್ಕಾರದ ಶಾಸಕರ ಸೆಳೆಯಲು ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಖಾಡಕ್ಕಿಳಿಯಲು ಮುಂದಾಗಿರುವ ಬಿಜೆಪಿ ಈ ಸಂಬಂಧ ಶಾಸಕಾಂಗ ಸಭೆ ನಡೆಸಲು ಮುಂದಾಗಿದೆ. ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ನಲ್ಲಿ ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್‌, ಆನಂದ್‌ ಸಿಂಗ್‌, ಭೀಮಾನಾಯ್ಕ್ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ, ಅವರಾರ‍ಯರಿಗೂ ಸಚಿವ ಸ್ಥಾನ ಸಿಗದ ಕಾರಣ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಮೇಲೆ ಮುಂದಿನ ಹೆಜ್ಜೆ ಇಡಲು ಬಿಜೆಪಿ ಮುಂದಾಗಿದೆ. ಬಿಜೆಪಿಗೆ ಸಂಖ್ಯಾಬಲದ ಕೊರತೆ ಇರುವ ಕಾರಣ ಅದನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ನಿಗಾವಹಿಸಿದ್ದು, 15-18 ಮಂದಿಯನ್ನು ತನ್ನತ್ತ ಸೆಳೆಯುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ಈಗಾಗಲೇ ಅತೃಪ್ತಿ ಶಾಸಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕುತ್ತಿದ್ದಾರೆ. ಎಷ್ಟುಮಂದಿ ತಮ್ಮ ಪಕ್ಷದ ವಿರುದ್ಧ ತೊಡೆತಟ್ಟಿಲಿದ್ದಾರೆ ಎಂಬ ಸಂಖ್ಯಾಧಾರದ ಮೇಲೆ ಮುಂದಿನ ನಡೆ ಇಡುವ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ. ಬಿಜೆಪಿಯಲ್ಲಿ ಸದ್ಯಕ್ಕೆ 104 ಶಾಸಕರಿದ್ದು, ಸರ್ಕಾರ ರಚನೆಗೆ 113 ಶಾಸಕರ ಅಗತ್ಯ ಇದೆ. 

ಇನ್ನು 9 ಶಾಸಕರ ಕೊರತೆ ಇರುವ ಇದೆ. ಕೇವಲ 9 ಮಂದಿಯನ್ನು ಸೆಳೆದಲ್ಲಿ ಉಪಚುನಾವಣೆಯಲ್ಲಿ ಅವರು ಜಯಗಳಿಸದಿದ್ದರೆ ಪಕ್ಷಕ್ಕೆ ತೀವ್ರ ಮುಖಭಂಗವಾಗಲಿದೆ. ಹೀಗಾಗಿ 9ಕ್ಕಿಂತ ಹೆಚ್ಚು ಶಾಸಕರನ್ನು ಸೆಳೆಯುವ ಉದ್ದೇಶ ಇದೆ. 15-18 ಮಂದಿಯನ್ನು ಸೆಳೆದರೆ ಸರ್ಕಾರ ರಚನೆಯ ಹಾದಿ ಸುಲಭವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ ಆಗಿದ್ದು, ಈ ನಿಟ್ಟಿನಲ್ಲಿ ರಾಜಕೀಯ ತಂತ್ರಗಾರಿಕೆ ರೂಪಿಸುವ ಆಲೋಚನೆ ನಡೆದಿದೆ ಎನ್ನಲಾಗಿದೆ.

ಬೆಳಗಾವಿಯ ಪ್ರಭಾವಿ ನಾಯಕ ರಮೇಶ್‌ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗಿದ್ದು, ಅಲ್ಲಿ ಅಸಮಾಧಾನದ ಹೊಗೆಯಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಿರೀಕ್ಷಿಸಿದೆ. ರಮೇಶ್‌ ಜಾರಕಿಹೊಳಿ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನಗಳನ್ನು ನಡೆಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಅಸಮಾಧಾನ ಖಚಿತ- ಬಿಎಸ್‌ವೈ:  ಈ ನಡುವೆ, ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಿಂದ ಸರ್ಕಾರದಲ್ಲಿ ಅಸಮಾಧಾನ ಭುಗಿಲೇಳುವುದು ಖಚಿತ ಎಂದು ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೇಳಲಿದೆ. ಸಾಕಷ್ಟುಬದಲಾವಣೆಗಳು ಆಗಲಿವೆ. ಕಾಂಗ್ರೆಸ್‌ನಲ್ಲಿ ಅತೃಪ್ತಿ ತಾಂಡವವಾಡುತ್ತಿದೆ. ಮೈತ್ರಿಕೂಟ ಸರ್ಕಾರದಲ್ಲಿ ಎರಡೂ ಪಕ್ಷಗಳಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಜೋರಾಗಿದೆ. ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಸಾಕಷ್ಟುಪರಿಣಾಮ ಬೀರಲಿದೆ ಎಂದರು.

ಕಳೆದ ಮೂರು ತಿಂಗಳಿಂದ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುತ್ತಾ ಮೈತ್ರಿ ಸರ್ಕಾರ ಕಾಲಹರಣ ಮಾಡಿದೆ. ಬಿಜೆಪಿ 104 ಜನ ಶಾಸಕರು ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದೇವೆ. ಮೈತ್ರಿ ಸರ್ಕಾರದಲ್ಲಿನ ಅಸಮಾಧಾನ ಭುಗಿಲೆದ್ದ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುತ್ತೇನೆ. ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಎಂದು ಹೇಳುತ್ತಾ ರೈತರಿಗೆ ಟೋಪಿ ಹಾಕುತ್ತಾ ಬಂದಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ದೋಷ ಎತ್ತಿ ತೋರಿಸಿದ್ದೇವೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಕಬ್ಬು ಬೆಳೆಗಾರರು, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪರಿಹಾರ ಕ್ರಮ ಕೈಗೊಂಡಿಲ್ಲ. ಬರಗಾಲದ ಬಗ್ಗೆ ವ್ಯಾಪಕ ಚರ್ಚೆ ಮಾಡಿದ್ದೇವೆ. ನಾನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲ ಅಧ್ಯಯನ ಪ್ರವಾಸ ಮಾಡುತ್ತೇನೆ. ಸರ್ಕಾರ ಕೊಟ್ಟಅಂಕಿ- ಅಂಶ ತಪ್ಪು ಎಂದು ಸಾಬೀತು ಮಾಡುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
ಧೋನಿಯನ್ನೇ ಬೆರಗುಗೊಳಿಸಿದ 4ರ ಪೋರಿಯ ಬ್ಯಾಟಿಂಗ್: ವೀಡಿಯೋ ವೈರಲ್