
ಬೆಂಗಳೂರು : ಕಳೆದ ಬಾರಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಅಡ್ಡಮತದಾನ ಮಾಡಿದ ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕು ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬಾರದು ಎಂಬ ಜೆಡಿಎಸ್ ಶಾಸಕರ ತಕರಾರಿಗೆ ಸಂಬಂಧಪಟ್ಟಂತೆ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.
ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ಅವರು, ಬಂಡಾಯ ಶಾಸಕರನ್ನು ಅನರ್ಹಗೊಳಿಸುವುದು ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಬಾರದು ಎಂಬ ಅರ್ಜಿಯ ವಾದ-ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದರು. ಸುಮಾರು ಒಂದು ತಾಸಿಗಿಂತ ಹೆಚ್ಚು ಕಾಲ ವಾದ-ಪ್ರತಿವಾದವನ್ನು ಆಲಿಸಿದರು.
ಇದೇ ತಿಂಗಳ 23ರಂದು (ಶುಕ್ರವಾರ) ನಡೆಯುವ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಪೀಕರ್ ಯಾವಾಗ ತೀರ್ಪು ನೀಡುತ್ತಾರೆ ಮತ್ತು ಏನು ತೀರ್ಪು ನೀಡುತ್ತಾರೆ ಎಂಬುದು ಕುತೂಹಲಕರವಾಗಿದೆ.
ಏಳು ಮಂದಿ ಬಂಡಾಯ ಶಾಸಕರಲ್ಲಿ ಚಲುರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್, ಎಚ್.ಸಿ.ಬಾಲಕೃಷ್ಣ ಮತ್ತು ಅಖಂಡ ಶ್ರೀನಿವಾಸಮೂರ್ತಿ ಹಾಜರಿದ್ದು, ಭೀಮಾನಾಯ್‌್ಕ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ ಗೈರು ಹಾಜರಾಗಿದ್ದರು. ಜೆಡಿಎಸ್ ಪರವಾಗಿ ದೂರುದಾರರಾದ ಬಿ.ಬಿ.ನಿಂಗಯ್ಯ, ಬಾಲಕೃಷ್ಣ ವಿಚಾರಣೆ ವೇಳೆ ಹಾಜರಿದ್ದರು.
ಮೊದಲು ಜೆಡಿಎಸ್‌ನ ಬಂಡಾಯ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜಗೋಪಾಲ್, ಸಂವಿಧಾನದ ಪರಿಚ್ಛೇದ 10ರ ಪ್ರಕಾರ ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಏಜೆಂಟರಿಗೆ ತೋರಿಸಿ ಮತ ಚಲಾಯಿಸುತ್ತಾರೆ. ಭಿನ್ನಮತೀಯರು ಎನ್ನಿಸಿರುವ ಶಾಸಕರು ಸಹ ಯಾವ ಅಭ್ಯರ್ಥಿಗೆ ಮತ ಚಲಾಯಿಸುತ್ತಿದ್ದೇವೆ ಎಂಬುದನ್ನು ತೋರಿಸಿಯೇ ಮತ ಹಾಕಿದ್ದಾರೆ. ಹೀಗಾಗಿ ಇದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಪ್ರಕರಣ ನಡೆದ ವಾರದಲ್ಲಿ ಸಭಾಧ್ಯಕ್ಷರು ಪ್ರಕರಣ ವಿಚಾರಣೆ ನಡೆಸಿ ಅಗತ್ಯ ದಾಖಲೆಗಳನ್ನು ಪಡೆದು ಇತ್ಯರ್ಥಗೊಳಿಸಬಹುದಾಗಿತ್ತು. ನಿಯಮ 60ರ ಅಡಿಯಲ್ಲಿ ಏಳು ದಿನದಲ್ಲಿ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಬೇಕಿತ್ತು. ಈ ಹಿಂದೆ ಸಂಸತ್‌ನಲ್ಲಿ ಕೆಲವು ಸದಸ್ಯರು ದುಡ್ಡಿಗಾಗಿ ಪ್ರಶ್ನೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಸ್ಪೀಕರ್ ಸೋಮನಾಥ ಚಟರ್ಜಿ ಮತ್ತು ಮಹಾರಾಷ್ಟ್ರ ನಡುವಿನ ವಿಷಯದಲ್ಲಿ ಸುಪ್ರೀಂಕೋರ್ಟ್ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಶಾಸಕರು ನಿರ್ದಿಷ್ಟಏಜೆಂಟರಿಗೆ ತೋರಿಸಿಯೇ ಮತ ಹಾಕಿರುವುದರಿಂದ ಕಾನೂನು ಉಲ್ಲಂಘನೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದರು.
ಜೆಡಿಎಸ್ ಪರ ವಾದ ಮಂಡಿಸಿದ ವಕೀಲ ನಿಶಾಂತ್, ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಮತ ಹಾಕುವುದು ಹಲವು ಸಂಶಯಗಳಿಗೆ ಕಾರಣವಾಗುತ್ತದೆ. ಕಾನೂನು ಉಲ್ಲಂಘನೆಯಾಗಿರುವ ಕಾರಣ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಮ್ಮ ವಿರುದ್ಧ ಹಗೆತನ ಸಾಧಿಸುತ್ತಿದ್ದಾರೆ. ನಮ್ಮ ರೀತಿಯಲ್ಲಿ ಹಲವು ಮಂದಿ ಸಂದರ್ಭಕ್ಕೆ ತಕ್ಕಂತೆ ಪಕ್ಷಾಂತರ ಮಾಡಿದ್ದಾರೆ. ಸ್ವತಃ ದೇವೇಗೌಡ ಅವರೇ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರಿಂದ ಬೇರ್ಪಟ್ಟು ಪಕ್ಷ ರಚನೆ ಮಾಡಿದ್ದರು. ಪಕ್ಷ ಬಿಟ್ಟು ಹೋದವರನ್ನು ಗುರಿಯಾಗಿಸಿಕೊಳ್ಳುವುದಿಲ್ಲ. ಆದರೆ ನಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇದನ್ನು ನಾವು ಎದುರಿಸುತ್ತೇವೆ.
- ಎನ್.ಚಲುವರಾಯಸ್ವಾಮಿ, ಬಂಡಾಯ ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.