ಇಂದು ಕರಾವಳಿಯಲ್ಲಿ ರಾಹುಲ್ : ಎಲ್ಲೆಲ್ಲಿಗೆ ಭೇಟಿ..?

By Suvarna Web DeskFirst Published Mar 20, 2018, 7:41 AM IST
Highlights

ಕೋಮು ಸಂಘರ್ಷದಿಂದ ಬಳಲುತ್ತಿರುವ ಕರಾವಳಿಯಲ್ಲಿ ಕೋಮು ಸಾಮರಸ್ಯದ ಅಗತ್ಯ ಸಾರುವ ಮೂಲಕ ಬಿಜೆಪಿಗೆ ಬಲವಾದ ತಿರುಗೇಟು ನೀಡಿ ಕರಾವಳಿಯಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಸಲು ಮಾ.20ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದು, ಕ್ಷಣಗಣನೆ ಆರಂಭವಾಗಿದೆ.

ಮಂಗಳೂರು : ಕೋಮು ಸಂಘರ್ಷದಿಂದ ಬಳಲುತ್ತಿರುವ ಕರಾವಳಿಯಲ್ಲಿ ಕೋಮು ಸಾಮರಸ್ಯದ ಅಗತ್ಯ ಸಾರುವ ಮೂಲಕ ಬಿಜೆಪಿಗೆ ಬಲವಾದ ತಿರುಗೇಟು ನೀಡಿ ಕರಾವಳಿಯಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಸಲು ಮಾ.20ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದು, ಕ್ಷಣಗಣನೆ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ರೋಡ್ ಶೋಗಳು, ಮೆಗಾ ರೋಡ್ ಶೋ, ಸಾರ್ವಜನಿಕ ಸಭೆಗಳ ಮೂಲಕ ರಾಹುಲ್ ಗಾಂಧಿ ಕರಾವಳಿಗೆ ಭರ್ಜರಿ ಎಂಟ್ರಿ ನೀಡಲಿದ್ದಾರೆ.

ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಸಭೆಗಳಲ್ಲಿ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ವಿಷಯಗಳನ್ನೇ ಜನರ ಮುಂದಿಡಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ ಕೋಮು ಸಂಘರ್ಷ ಘಟನೆಗಳ ಮುಂದಿಟ್ಟುಕೊಂಡು ವಿರುದ್ಧ ಬಿಜೆಪಿ, ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಜೊತೆಗೆ ಕೋಮು ಸಾಮರಸ್ಯ ಸಂದೇಶ ಸಾರುವ ಉದ್ದೇಶದಿಂದ ಹಿಂದು, ಮುಸ್ಲಿಂ, ಕ್ರೈಸ್ತರ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿಗೆ ಆಗಮಿಸಿ ವ್ಯಾಪಕ ಪ್ರಚಾರ ನಡೆಸಿದ್ದರು. ಇದಕ್ಕೆ ಸಡ್ಡು ಹೊಡೆಯುವಂತೆ ಜಿಲ್ಲೆಯಲ್ಲಿ ಕೈ ಬಲ ಪ್ರದರ್ಶನಕ್ಕೆ ಭರ್ಜರಿಯಾಗಿಯೇ ಸಿದ್ಧತೆ ನಡೆದಿದೆ.

ಇಡೀ ದಿನ ಕರಾವಳಿಯುದ್ದಕ್ಕೂ ಭಾರಿ ಜನಶಕ್ತಿ ಪ್ರದರ್ಶಿಸಲು, ಕಾಂಗ್ರೆಸ್ ಅಲೆ ಎಬ್ಬಿಸಲು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮುಖಂಡರು ಸಕಲ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಮಂಗಳವಾರ ಬೆಳಗ್ಗೆ 11.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ, ಹೆಲಿಕಾಪ್ಟರ್ ಮೂಲಕ ಉಡುಪಿಯ ತೆಂಕ ಎರ್ಮಾಳ್‌ಗೆ ತೆರಳುತ್ತಾರೆ. ಅಲ್ಲಿಂದ ಮಂಗಳೂರಿನವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ರೋಡ್ ಶೋ ನಡೆಸಲಿದ್ದಾರೆ.

click me!