
ಬೆಂಗಳೂರು(ಜುಲೈ 21): ಜೆಡಿಎಸ್'ನ ಬಂಡಾಯ ಶಾಸಕ ಚೆಲುವರಾಯಸ್ವಾಮಿಯವರು ಕಾಂಗ್ರೆಸ್'ಗೆ ಸೇರುವುದು ಖಚಿತವೆಂಬ ಸುದ್ದಿ ಇನ್ನಷ್ಟು ದಟ್ಟವಾಗಿ ಹರಡುತ್ತಿದೆ. ಮಂಡ್ಯದ ನಾಗಮಂಗಲ ಕ್ಷೇತ್ರದ ಶಾಸಕ ಚಲುವರಾಯಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಮಹಾಲಕ್ಷ್ಮೀಲೇಔಟ್ ಕ್ಷೇತ್ರದಿಂದ ಚೆಲುವರಾಯಸ್ವಾಮಿಯವರು ಕಾಂಗ್ರೆಸ್ ಟಿಕೆಟ್'ನಿಂದ ಕಣಕ್ಕಿಳಿಯಲಿದ್ದಾರಂತೆ. ಜಮೀರ್ ಅಹ್ಮದ್ ಅವರು ತಮ್ಮ ಗೆಳೆಯ ಚಲುವರಾಯಸ್ವಾಮಿಗೆ ಪೂರ್ಣ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಜೆಡಿಎಸ್'ನ ರೆಬೆಲ್'ಗಳೆಲ್ಲರೂ ಆ ಪಕ್ಷಕ್ಕೆ ಪಾಠ ಕಲಿಸಲು ಮಾಸ್ಟರ್'ಪ್ಲಾನ್ ಮಾಡಿದ್ದು, ಚೆಲುವರಾಯಸ್ವಾಮಿಯನ್ನು ಮಹಾಲಕ್ಷ್ಮೀ ಲೇಔಟ್'ನಲ್ಲಿ ಕಣಕ್ಕಿಳಿಸುವುದು ಆ ಯೋಜನೆಯ ಒಂದು ಭಾಗವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಲಾರಂಭಿಸಿದೆ.
ನಾಗಮಂಗಲ ಬಿಡೋದು ಯಾಕೆ?
ನಾಗಮಂಗಲ ಕ್ಷೇತ್ರದಲ್ಲಿ ಚಲುವರಾಯಸ್ವಾಮಿಯ ಕಡು ವಿರೋಧಿ ಹಾಗೂ ಪ್ರಬಲ ಸ್ಪರ್ಧಿ ಸುರೇಶ್ ಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಸುರೇಶ್ ಗೌಡರೇ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಮಾಜಿ ಶಾಸಕರಾಗಿರುವ ಸುರೇಶ್ ಗೌಡರು ಈಗ ರಾಜಕೀಯವಾಗಿ ಇನ್ನಷ್ಟು ಪ್ರಭಾವಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್'ನಲ್ಲಿ ಚಲುವರಾಯಸ್ವಾಮಿ ನಾಗಮಂಗಲದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ಗ್ಯಾರಂಟಿ ಇಲ್ಲ. ಹೀಗಾಗಿ, ಅವರು ನಾಗಮಂಗಲ ತೊರೆಯಲು ಇದು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮಹಾಲಕ್ಷ್ಮೀ ಲೇಔಟ್'ನಲ್ಲೇ ಯಾಕೆ?
ಮಹಾಲಕ್ಷ್ಮೀ ಲೇಔಟ್'ನಲ್ಲಿ ಹಾಲಿ ಶಾಸಕರು ಜೆಡಿಎಸ್'ನವರೇ. ಹೀಗಿದ್ದೂ ಚೆಲುರಾಯಸ್ವಾಮಿಯವರು ಈ ಕ್ಷೇತ್ರಕ್ಕೆ ಯಾಕೆ ಕಾಲಿಡುತ್ತಾರೆ ಎಂಬುದು ಕುತೂಹಲದ ವಿಚಾರವೇ. ಚಲುರಾಯಸ್ವಾಮಿಯವರು ಇಲ್ಲಿ ಕಣಕ್ಕಿಳಿಯಲು ಕೆಲ ಪ್ರಬಲ ಕಾರಣಗಳಿವೆ.
1) ಮಾಜಿ ಕಾಂಗ್ರೆಸ್ ಶಾಸಕ, ಚಿತ್ರನಟ ನೆ.ಲ.ನರೇಂದ್ರ ಬಾಬು ಈ ಕ್ಷೇತ್ರದಲ್ಲಿ ತಮ್ಮ ಹಿಡಿತ ಕಳೆದುಕೊಂಡಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್'ಗೆ ಇಲ್ಲಿ ಸಮರ್ಥ ಅಭ್ಯರ್ಥಿಯ ಅಗತ್ಯವಿದೆ.
2) ಈ ಕ್ಷೇತ್ರವು ಒಕ್ಕಲಿಗರ ಪ್ರಾಬಲ್ಯ ಹೊಂದಿದೆ. ಚೆಲುವರಾಯಸ್ವಾಮಿ ಪ್ರಬಲ ಒಕ್ಕಲಿಗ ಮುಖಂಡರಾಗಿದ್ದಾರೆ.
3) ಜೆಡಿಎಸ್'ನಲ್ಲಿ ತುಳಿತಕ್ಕೊಳಗಾಗಿದ್ದೇನೆಂದು ಹೇಳಿಕೊಳ್ಳುತ್ತಿರುವ ಚೆಲುರಾಯಸ್ವಾಮಿಯವರು ಮಹಾಲಕ್ಷ್ಮೀ ಲೇಔಟ್'ನಲ್ಲಿ ಅನುಕಂಪದ ಅಲೆ ಸೃಷ್ಟಿಸಲು ಯತ್ನಿಸಬಹುದು.
ವರದಿ: ಶ್ರೀನಿವಾಸ ಹಳಕಟ್ಟಿ, ಸುವರ್ಣನ್ಯೂಸ್, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.