
ಗದಗ(ಜುಲೈ 21): ನರಗುಂದದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರ ಹೋರಾಟಕ್ಕೀಗ ಬರೋಬ್ಬರಿ 37 ವರ್ಷ. 1980, ಜುಲೈ21 ರಂದು ಹೋರಾಟವನ್ನು ರೈತರು ತೀವ್ರಗೊಳಿಸಿದ್ದರು. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದರು. ಒಂದೆಡೆ ಪೊಲೀಸರ ಗುಂಡಿಗೆ ರೈತರು ಬಲಿಯಾದ್ರೆ, ರೈತರ ಕಿಚ್ಚಿಗೆ ಹಲವು ಪೊಲೀಸರೂ ಹತರಾಗಿದ್ದರು. ಹೀಗಾಗಿ ಪ್ರತಿ ವರ್ಷದಂತೆ ಇಂದು ಸಹ ನರಗುಂದದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಆದ್ರೆ ರೈತರು ಈ ಬಾರಿ ಹುತಾತ್ಮ ದಿನವನ್ನ ಬೇರೆಯದೇ ರೀತಿಯಲ್ಲಿ ಆಚರಿಸಲು ರೆಡಿಯಾಗಿದ್ದಾರೆ.
ಇದೇ ಬಂಡಾಯದ ನೆಲದಲ್ಲೀಗ ಮಹದಾಯಿ-ಕಳಸಾ ಕಿಚ್ಚು ಹತ್ತಿದೆ. ರೈತರು ಮಹದಾಯಿ ಹೋರಾಟ ಪ್ರಾರಂಭಿಸಿ 2 ವರ್ಷ ಕಳೆದರೂ ರಾಜ್ಯ ಸರ್ಕಾರದಿಂದಾಗಲೀ ಅಥವಾ ಕೇಂದ್ರ ಸರ್ಕಾರದಿಂದಾಗಲೀ ಸಮಸ್ಯೆ ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ. ಕಳಸಾ ಹೋರಾಟ ವೇದಿಕೆ ಅಧ್ಯಕ್ಷ ವಿರೇಶ್ ಸೊಬರದಮಠ ಉಪವಾಸ ಸತ್ಯಾಗ್ರಹ ಆರಂಭಿಸಿ 5 ದಿನಗಳಾಯಿತು. ಹೀಗಾಗಿ ರೈತರು ರೈತ ಹುತಾತ್ಮ ದಿನದಂದೇ ಸರ್ಕಾರಗಳ ವಿರುದ್ಧ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಇಂದು ಗದಗ ಜಿಲ್ಲೆ ನರಗುಂದದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಂಭವವಿದೆ. ರೈತ ಹುತ್ಮಾತ್ಮ ದಿನಾಚರಣೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತ ಮುಖಂಡರು, ರೈತರು, ಜನಪ್ರತಿನಿಧಿಗಳು, ವಿವಿಧ ಕನ್ನಡ - ದಲಿತ ಪರ ಸಂಘಟನೆಗಳ ಮುಖಂಡರು ಅಪಾರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹೀಗಾಗಿ ನರಗುಂದ ಪಟ್ಟಣದಲ್ಲಿ ಮುಂಜಾಗೃತೆ ಕ್ರಮವಾಗಿ ಇಂದು ಬೆಳಗ್ಗೆಯಿಂದಲೇ ಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ, ಗದಗ ನಗರ ಹಾಗೂ ನರಗುಂದ ತಾಲೂಕನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
- ಅಮೃತ ಅಜ್ಜಿ, ಗದಗ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.