ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟು ಜೆಡಿಎಸ್‌ ತಯಾರಿ!

By Web DeskFirst Published Mar 11, 2019, 11:02 AM IST
Highlights

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇದೇ ವೇಳೇ ವಿವಿಧ ಪಕ್ಷಗಳ ಭರ್ಜರಿ ಸಿದ್ಧತೆ ಆರಂಭವಾಗಿದೆ. ಗೆಲುವಿಗಾಗಿ ಪಕ್ಷಗಳು ಗುರಿಯಿರಿಸಿ ತಯಾರಿ ಮಾಡಿಕೊಳ್ಳುತ್ತಿವೆ. 

ಬೆಂಗಳೂರು :  ಈ ಚುನಾವಣೆ ಮೂಲಕ ರಾಜ್ಯವಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲೂ ತನ್ನ ಪ್ರಭಾವ ಹಾಗೂ ನೆಲೆ ವಿಸ್ತರಿಸಿಕೊಳ್ಳಲು ಆಡಳಿತಾರೂಢ ಜೆಡಿಎಸ್‌ ಮುಂದಾಗಿದೆ. ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ. ಆದರೆ, ಈ ಬಾರಿ ಕಾಂಗ್ರೆಸ್‌ ಪಕ್ಷದ ಸಹಕಾರ ಮತ್ತು ಹೊಂದಾಣಿಕೆಯೊಂದಿಗೆ ಹೆಚ್ಚು ಸ್ಥಾನ ಗಳಿಸಲು ತಂತ್ರ ರೂಪಿಸತೊಡಗಿದೆ.

ರಾಷ್ಟ್ರ ಮಟ್ಟದಲ್ಲಿ ಮಹಾಗಠಬಂಧನ್‌ ರಚನೆಯಾಗುವಲ್ಲಿ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪಾತ್ರ ಮಹತ್ವದ್ದಾಗಿದೆ. ಲೋಕಸಭಾ ಚುನಾವಣೆ ನಂತರ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಲು ಈಗಲೇ ಗೌಡರು ಸಿದ್ಧರಾಗುತ್ತಿದ್ದಾರೆ. ಸ್ಥಾನ ಹೊಂದಾಣಿಕೆಯ ಲಾಭ ಪಡೆದು ಕನಿಷ್ಠ ಐದು ಅಥವಾ ಆರು ಸ್ಥಾನಗಳನ್ನು ಗೆಲ್ಲುವ ಬಗ್ಗೆ ಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಳೆದ ಹಲವು ದಿನಗಳಿಂದ ತಂತ್ರ ರೂಪಿಸುವುದರಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್‌ ಜೊತೆಗಿನ ಸ್ಥಾನ ಹೊಂದಾಣಿಕೆ ಅಂತಿಮಗೊಂಡ ಬೆನ್ನಲ್ಲೇ ಜೆಡಿಎಸ್‌ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ಸರ್ಕಾರದ ಚುಕ್ಕಾಣಿ ಹಿಡಿದಿರುವುದರಿಂದ ಹಾಗೂ ತಾವು ಜಾರಿಗೆ ತಂದಿರುವ ರೈತರ ಸಾಲಮನ್ನಾ ಸೇರಿದಂತೆ ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕು. ಇವುಗಳ ಮೂಲಕವೇ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮನಗೆದ್ದು ಹೆಚ್ಚು ಸ್ಥಾನ ಗಳಿಸಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ ಪಾಳೆಯದಲ್ಲಿ ನಡೆಯುತ್ತಿದೆ.

ಆದರೆ, ಮಂಡ್ಯ ಕ್ಷೇತ್ರದ ಗೊಂದಲದಿಂದಾಗಿ ಸದ್ಯಕ್ಕೆ ಪಕ್ಷದಲ್ಲಿ ತುಸು ಗೊಂದಲ ಉಂಟಾಗಿದ್ದರೂ ಅದನ್ನು ನಿವಾರಿಸಿಕೊಂಡು ಮುನ್ನುಗ್ಗಲು ಜೆಡಿಎಸ್‌ ನಾಯಕರು ನಿರ್ಧರಿಸಿದ್ದಾರೆ. ಮಂಡ್ಯ ಕ್ಷೇತ್ರ ಜೆಡಿಎಸ್‌ಗೇ ಲಭಿಸುವುದು ನಿಶ್ಚಿತವಾಗಿದ್ದರಿಂದ ಕಾಂಗ್ರೆಸ್ಸಿನ ಸುಮಲತಾ ಅಂಬರೀಷ್‌ ಅವರ ರಂಗ ಪ್ರವೇಶದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಸವಾಲಾಗಿಯೇ ಪರಿಣಮಿಸಿದೆ.

ಜೆಡಿಎಸ್‌ ವರಿಷ್ಠ ದೇವೇಗೌಡರು ಈ ಲೋಕಸಭಾ ಚುನಾವಣೆ ಮೂಲಕ ತಮ್ಮ ಇಬ್ಬರು ಮೊಮ್ಮಕ್ಕಳನ್ನು ಲೋಕಸಭೆಗೆ ಕಳುಹಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಅವರನ್ನು ಮಂಡ್ಯದಿಂದ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ಅವರನ್ನು ಹಾಸನದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ. ಆದರೆ, ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಈ ನಡುವೆ ಆ ಎರಡೂ ಕ್ಷೇತ್ರಗಳಲ್ಲೂ ಸ್ಥಳೀಯ ಕಾಂಗ್ರೆಸ್‌ ಮುಖಂಡರು ನಿರೀಕ್ಷಿತ ಮಟ್ಟದ ಸಹಕಾರ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಸನದಿಂದ ಪ್ರಜ್ವಲ್‌ ಬದಲು ದೇವೇಗೌಡರೇ ಸ್ಪರ್ಧಿಸಲಿ ಎಂಬ ಮಾತು ಕೇಳಿಬಂದಿದ್ದರೆ, ಮಂಡ್ಯದಿಂದ ನಿಖಿಲ್‌ ಸ್ಪರ್ಧೆಗೂ ವಿರೋಧ ವ್ಯಕ್ತವಾಗತೊಡಗಿದೆ. ಇವೆರಡನ್ನೂ ಸರಿದೂಗಿಸಿಕೊಂಡು ದೇವೇಗೌಡರು ತಮ್ಮ ಕ್ಷೇತ್ರ ಅಂತಿಮಗೊಳಿಸಬೇಕಾಗಿದೆ. ಬಹುತೇಕ ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ದೇವೇಗೌಡರು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂಬ ಮಾತು ಗಂಭೀರವಾಗಿ ಕೇಳಿಬಂದಿದ್ದು, ತಪ್ಪಿದಲ್ಲಿ ಮೈಸೂರಿಗೆ ಹೋಗಬಹುದು ಎನ್ನಲಾಗುತ್ತಿದೆ.

click me!