ಮತ್ತೆ ಬಿಎಸ್‌ವೈ ಮನೆಗೆ ಜೆಡಿಎಸ್ ಶಾಸಕ ಜಿಟಿಡಿ| ಜೆಡಿಎಸ್ ನಾಯಕರಿಂದ ನೋವಾಗಿದೆ, ತಟಸ್ಥನಾಗಿದ್ದೇನೆ| ಮೂರೂವರೆ ವರ್ಷ ಏನೂ ಹೇಳುವುದಿಲ್ಲ: ಮಾಜಿ ಸಚಿವ ಬೇಸರ
ಬೆಂಗಳೂರು[ಸೆ.10]: ಪಕ್ಷದ ಚಟುವಟಿಕೆಗಳಿಗೆ ದೂರವಿದ್ದು, ಕ್ಷೇತ್ರದ ಅಭಿವೃದ್ಧಿ ಹೆಸರಲ್ಲಿ ಪದೇ ಪದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಉಂಟುಮಾಡಿದೆ.
ಸೋಮವಾರ ಡಾಲರ್ಸ್ ಕಾಲೋನಿಯಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ದೇವೇಗೌಡ ಕೆಲಕಾಲ ಸಮಾಲೋಚನೆ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವೈಯಕ್ತಿಕವಾಗಿ ಕೆಲವು ಕಾರಣಗಳಿಂದ ಜೆಡಿಎಸ್ ನಾಯಕರಿಂದ ನೋವಾಗಿದೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಿಂದ ದೂರು ಉಳಿದಿದ್ದೇನೆ. ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರುವ ವಿಚಾರ ಇಲ್ಲ. ಬಿಜೆಪಿಯವರು ಸಹ ನನ್ನನ್ನು ಕರೆದಿಲ್ಲ, ನಾನು ಬಿಜೆಪಿಗೆ ಬರುತ್ತೇನೆ ಎಂಬುದಾಗಿ ಅವರಿಗೆ ಹೇಳಿಲ್ಲ. ಮುಂದಿನ ಮೂರೂವರೆ ವರ್ಷ ನಾನು ಏನೂ ಹೇಳುವುದಿಲ್ಲ ಎಂದು ಪಕ್ಷದ ವರಿಷ್ಠರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪಗೆ ಜಿಟಿಡಿ ಸ್ವಾಗತ!: ಕುತೂಹಲ ಮೂಡಿಸಿದೆ JDS ಶಾಸಕನ ನಡೆ!
ಈಗ ನಾನು ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ತಟಸ್ಥವಾಗಿರುವ ನನ್ನ ಬಗ್ಗೆ ಪಕ್ಷದ ಮುಖಂಡ ಸಾ.ರಾ.ಮಹೇಶ್ ಏನು ಹೇಳಿದ್ದಾರೋ ಗೊತ್ತಿಲ್ಲ. ನಾವಿಬ್ಬರೂ ಭೇಟಿಯಾಗಿಲ್ಲ. ಪಕ್ಷದಲ್ಲಿ ನಾನು ತಟಸ್ಥನಾಗಿರುವುದು ನಿಜ. ಕೆಲವು ಕಾರಣಗಳಿಂದಾಗಿ ಪಕ್ಷದಲ್ಲಿ ತುಂಬಾ ನೋವಾಗಿದೆ. ಇದರಿಂದ ಹೊರಬಂದು ಸುಧಾರಿಸಿಕೊಳ್ಳಲು ಸಮಯ ಬೇಕು. ಕಾರ್ಯಕರ್ತರನ್ನು ಕೈಬಿಡುವುದಿಲ್ಲ ಎಂದು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಮಗಾರಿಗಳು ತಡೆಯಾಗಿವೆ. ಅಭಿವೃದ್ಧಿ ಕೆಲಸಗಳು ನಿಂತು ಹೋಗಿರುವ ಕಾರಣಕ್ಕಾಗಿ ಚರ್ಚಿಸಲು ಮುಖ್ಯಮಂತ್ರಿಗಳ ಭೇಟಿಗಾಗಿ ಆಗಮಿಸಿದ್ದೆ. ಕ್ಷೇತ್ರದಲ್ಲಿ ತಡೆಯಾಗಿರುವ ಕಾಮಗಾರಿ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಸಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಅಭಿವೃದ್ಧಿ ವಿಚಾರ ಹೊರತುಪಡಿಸಿ ಯಾವುದೇ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿಲ್ಲ ಎಂದು ಸಮಜಾಯಿಷಿ ನೀಡಿದರು.