ಪ್ರಮುಖ ನಿಗಮ-ಮಂಡಳಿ ಹುದ್ದೆಗೂ ಜೆಡಿಎಸ್ ಪಟ್ಟು?

Published : Jun 04, 2018, 08:38 AM ISTUpdated : Jun 04, 2018, 08:39 AM IST
ಪ್ರಮುಖ ನಿಗಮ-ಮಂಡಳಿ ಹುದ್ದೆಗೂ ಜೆಡಿಎಸ್ ಪಟ್ಟು?

ಸಾರಾಂಶ

ಸಂಖ್ಯೆ ದೃಷ್ಟಿಯಿಂದ ಕಡಿಮೆ ನಿಗಮ ಮಂಡಳಿಗಳು ಲಭಿಸುವುದಾದರೂ ಬಿಡಿಎ, ಕೆಎಸ್‌ಆರ್‌ಟಿಸಿಯಂಥ ಪ್ರಮುಖ ನಿಗಮ ಮಂಡಳಿಗಳು ತಮ್ಮ ಪಕ್ಷಕ್ಕೆ ಸಿಗಬೇಕು ಎಂಬ ಪಟ್ಟು ಹಿಡಿಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.

ಬೆಂಗಳೂರು (ಜೂ. 04): ಸಂಖ್ಯೆ ದೃಷ್ಟಿಯಿಂದ ಕಡಿಮೆ ನಿಗಮ ಮಂಡಳಿಗಳು ಲಭಿಸುವುದಾದರೂ ಬಿಡಿಎ, ಕೆಎಸ್‌ಆರ್‌ಟಿಸಿಯಂಥ ಪ್ರಮುಖ ನಿಗಮ ಮಂಡಳಿಗಳು ತಮ್ಮ ಪಕ್ಷಕ್ಕೆ ಸಿಗಬೇಕು ಎಂಬ ಪಟ್ಟು ಹಿಡಿಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆಗಿರುವ ಒಪ್ಪಂದದ ಪ್ರಕಾರ ಒಟ್ಟು ನಿಗಮ ಮಂಡಳಿಗಳ ಪೈಕಿ ಕಾಂಗ್ರೆಸ್ಸಿಗೆ ಮೂರನೇ ಎರಡರಷ್ಟು ಮತ್ತು ಜೆಡಿಎಸ್‌ಗೆ ಮೂರನೇ ಒಂದರಷ್ಟು ಲಭಿಸಲಿವೆ. ಲಾಭದಲ್ಲಿರುವ ಮತ್ತು ನಷ್ಟದಲ್ಲಿರುವ ಸೇರಿದಂತೆ ಸುಮಾರು 90 ನಿಗಮ ಮಂಡಳಿಗಳಿವೆ. ಒಪ್ಪಂದದ ಪ್ರಕಾರ, 60 ಕಾಂಗ್ರೆಸ್ ಮತ್ತು 30 ಜೆಡಿಎಸ್ ಪಾಲಾಗಲಿವೆ. 

ಮುಖ್ಯಮಂತ್ರಿ ಸ್ಥಾನ ದೊರೆತಿದೆ ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಪ್ರಮುಖ ಖಾತೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದೆ. ಮೇಲಾಗಿ ಸಂಖ್ಯಾ ದೃಷ್ಟಿಯಿಂದಲೂ ಹೆಚ್ಚಿನ ಮಂತ್ರಿ ಸ್ಥಾನ ದೊರೆತಿಲ್ಲ. ಹೀಗಾಗಿ, ನಿಗಮ ಮಂಡಳಿಗಳಲ್ಲಾದರೂ ಪ್ರಮುಖವಾದವು ಸಿಕ್ಕರೆ ಪಕ್ಷದಲ್ಲಿನ ಶಾಸಕರು ಹಾಗೂ ಮುಖಂಡರನ್ನು ಸಮಾಧಾನಪಡಿಸಬಹುದು ಎಂಬ ನಿಲುವು ಗೌಡರದ್ದು. ಹೀಗಾಗಿ, ಇದರಲ್ಲಾದರೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬ ಮಾತನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನದಿಂದ ವಂಚಿತಗೊಳ್ಳಬಹುದಾದ ಕೆಲವು ಶಾಸಕರು ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ವೇಳೆ, ತಮಗೆ ಸಚಿವ ಸ್ಥಾನ ನೀಡದಿದ್ದರೂ ಪ್ರಮುಖ ನಿಗಮ ಮಂಡಳಿಗಳನ್ನಾದರೂ ನೀಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಹೀಗಾಗಿ, ದೇವೇಗೌಡರು ನಿಗಮ ಮಂಡಳಿಗಳ ಬಗ್ಗೆ ಗಮನ ಹರಿಸಿದ್ದಾರೆ. ಕೆಲವು ಪ್ರಬಲ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡುವ ಮೂಲಕ ಸಂಪುಟ ದರ್ಜೆ ಸ್ಥಾನಮಾನ ನೀಡುವ ಲೆಕ್ಕಾಚಾರ ಹೊಂದಿದ್ದಾರೆ ಎನ್ನಲಾಗಿದೆ.

ಯಾರಿಗೆ ಯಾವ ನಿಗಮ-ಮಂಡಳಿ?
ಒಟ್ಟು ನಿಗಮ ಮಂಡಳಿಗಳ ಪೈಕಿ ಯಾವ ಪಕ್ಷಕ್ಕೆ ಎಷ್ಟು ಎಂಬುದು ತೀರ್ಮಾನ ಆಗಿದೆಯಾದರೂ ಅದರ ಅಂತಿಮ ರೂಪುರೇಷೆ ಇನ್ನೂ ಸಿದ್ಧಗೊಂಡಿಲ್ಲ. ಪ್ರತಿಯೊಂದು ನಿಗಮ ಮಂಡಳಿಯೂ ಒಂದಿಲ್ಲೊಂದು ಇಲಾಖೆಯ ಅಡಿಯಲ್ಲೇ ಬರುತ್ತದೆ. ಹೀಗಾಗಿ, ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಕೆಯಾಗಿರುವ ಖಾತೆಗಳ ಅಡಿಯಲ್ಲಿ ಬರುವ ನಿಗಮ ಮಂಡಳಿಗಳು ಆಯಾ ಪಕ್ಷಕ್ಕೆ ಹೋಗುತ್ತವೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.

ಆಯಾ ಪಕ್ಷಕ್ಕೆ ನಿಗದಿಯಾಗಿರುವ ಇಲಾಖೆಗಳ ಅಡಿಯಲ್ಲಿನ ನಿಗಮ ಮಂಡಳಿಗಳು ಆಯಾ ಪಕ್ಷಗಳಿಗೇ ಎಂಬುದೇನಾದರೂ ನಿರ್ಧಾರವಾದಲ್ಲಿ ಆಗ ಹಂಚಿಕೆ ಹೆಚ್ಚು ಗೊಂದಲವಾಗಲಿಕ್ಕಿಲ್ಲ. ಆದರೆ, ಹಾಗಾಗದಿದ್ದಲ್ಲಿ ಪ್ರಮುಖ ನಿಗಮ ಮಂಡಳಿಗಳಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮತ್ತೊಂದು ಸುತ್ತಿನ ಪೈಪೋಟಿ ಆರಂಭವಾಗುವುದು ನಿಶ್ಚಿತ ಎಂದು ತಿಳಿದು ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಂಧ್ರ ಬಿದ್ದು ತುಂಗಭದ್ರಾ ನದಿಯಲ್ಲಿ ನಿಂತ ನಾಡದೋಣಿ, ಬರೋಬ್ಬರಿ 3 ಜಿಲ್ಲೆಗಳ ಸಂಪರ್ಕ ಕಡಿತ! ಜನರ ಪರದಾಟ
BMC Exit Poll: ಬಿಜೆಪಿ-ಶಿಂಧೆ ಸೇನೆಗೆ ಮುಂಬೈ ಅಧಿಕಾರ, ಮಣ್ಣುಮುಕ್ಕಿದ ಠಾಕ್ರೆ!