ಜಯಾ ವಿರುದ್ಧದ ರಾಜ್ಯದ ಕಾನೂನು ಹೋರಾಟ ಅಂತ್ಯ

Published : Oct 01, 2018, 10:03 AM IST
ಜಯಾ ವಿರುದ್ಧದ ರಾಜ್ಯದ ಕಾನೂನು ಹೋರಾಟ ಅಂತ್ಯ

ಸಾರಾಂಶ

ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ನಿರೂಪಿಸಲು ಹಾಗೂ 100 ಕೋಟಿ ರು. ದಂಡ ವಸೂಲು ಮಾಡಲು ಕರ್ನಾಟಕ ನಡೆಸಿದ್ದ ಕಾನೂನು ಹೋರಾಟ ಪರಿಸಮಾಪ್ತಿಯಾದಂತಾಗಿದೆ.  

ನವದೆಹಲಿ: ಶಿಕ್ಷೆ ಪ್ರಕಟಿಸುವ ಮೊದಲೇ ನಿಧನ ಹೊಂದಿದ್ದರು ಎಂಬ ಕಾರಣಕ್ಕೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರನ್ನು ಹೊರಗಿಟ್ಟಿದ್ದ ತೀರ್ಪು ಪ್ರಶ್ನಿಸಿ ಕರ್ನಾಟಕ ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಹೀಗಾಗಿ ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ನಿರೂಪಿಸಲು ಹಾಗೂ 100 ಕೋಟಿ ರು. ದಂಡ ವಸೂಲು ಮಾಡಲು ಕರ್ನಾಟಕ ನಡೆಸಿದ್ದ ಕಾನೂನು ಹೋರಾಟ ಪರಿಸಮಾಪ್ತಿಯಾದಂತಾಗಿದೆ.

ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸದ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ನ್ಯಾಯಾಲಯ ವಜಾಗೊಳಿಸಿತ್ತು. ಆ ತೀರ್ಪು ಮರುಪರಿಶೀಲಿಸುವಂತೆ ಕೋರಿ ಕ್ಯುರೇಟಿವ್‌ ಅರ್ಜಿಯೊಂದನ್ನು ಸಲ್ಲಿಸಿತ್ತು. ಕೆಲ ದಿನಗಳ ಹಿಂದಷ್ಟೇ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌ ಹಾಗೂ ಮದನ್‌ ಬಿ. ಲೋಕೂರ್‌ ಅವರು ತಮ್ಮ ಕೊಠಡಿಯಲ್ಲಿ ಈ ಅರ್ಜಿ ವಿಚಾರಣೆ ನಡೆಸಿ, ಅದನ್ನು ತಿರಸ್ಕರಿಸಿದ್ದಾರೆ.

ಈ ಅರ್ಜಿಗೆ ಯಾವುದೇ ಅರ್ಹತೆ ಇಲ್ಲ. ಕ್ಯುರೇಟಿವ್‌ ಅರ್ಜಿ ಎಂಬುದು ಅಪರೂಪಕ್ಕೆ ಬಳಸಬಹುದಾದ ಕಾನೂನು ಪರಿಹಾರ. ಜಯಲಲಿತಾ ಕುರಿತ ಅರ್ಜಿ ವಜಾ ವೇಳೆ ನೈಸರ್ಗಿಕ ನ್ಯಾಯ ಉಲ್ಲಂಘನೆಯಾಗಿದೆ ಅಥವಾ ಜಡ್ಜ್‌ಗಳು ಪಕ್ಷಪಾತ ಮಾಡಿದ್ದಾರೆ ಎಂಬುದನ್ನು ಕರ್ನಾಟಕ ನಿರೂಪಿಸಿಲ್ಲ ಎಂದು ಹೇಳಿತು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಹಾಗೂ ಅವರ ಆಪ್ತ ಗೆಳತಿ ವಿ.ಕೆ. ಶಶಿಕಲಾ ಅವರನ್ನು ಕರ್ನಾಟಕ ಹೈಕೋರ್ಟ್‌ ಖುಲಾಸೆಗೊಳಿಸಿತ್ತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ತೀರ್ಪು ಬರುವಷ್ಟರಲ್ಲಿ ಜಯಲಲಿತಾ ನಿಧನರಾಗಿದ್ದರು. ಹೀಗಾಗಿ ಶಿಕ್ಷೆಯಿಂದ ಅವರ ಹೆಸರನ್ನು ಹೊರಗಿಟ್ಟು, ಶಶಿಕಲಾ ಹಾಗೂ ಇತರರ ವಿರುದ್ಧ ತೀರ್ಪು ನೀಡಿತ್ತು. ವಿಚಾರಣಾ ನ್ಯಾಯಾಲಯ ವಿಧಿಸಿದ್ದ 100 ಕೋಟಿ ರು. ದಂಡ ಕೂಡ ಜಯಾ ನಿಧನದೊಂದಿಗೆ ವಿನಾಯಿತಿ ಪಡೆದಿತ್ತು. ಇದರ ವಿರುದ್ಧ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು.

ವಾದ ಸರಣಿ ಮುಗಿದು, ತೀರ್ಪನ್ನು ಕಾದಿರಿಸಿದ ಬಳಿಕ ಪ್ರತಿವಾದಿ ಸಾವನ್ನಪ್ಪಿದ್ದರೆ ಅಂಥವರ ಶಿಕ್ಷೆ ಮಾಫಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿತ್ತು. ಜಯಲಲಿತಾ ಅವರ ಎಸ್ಟೇಟ್‌ನಿಂದ 100 ಕೋಟಿ ರು. ದಂಡ ವಸೂಲಿ ಮಾಡಬೇಕು ಎಂದು ವಿನಂತಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!