
ಚೆನ್ನೈ : ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸಾವನ್ನಪ್ಪಿದ ಸುಮಾರು ಒಂದೂವರೆ ವರ್ಷದ ತರುವಾಯ, ಅವರು ಬರೆದಿದ್ದರು ಎನ್ನಲಾದ ಊಟದ ಮೆನು ಉಳ್ಳ 98 ಪುಟಗಳ ದಾಖಲೆ ಹಾಗೂ ವೈದ್ಯರ ಜತೆ ಮಾತನಾಡುವ 52 ಸೆಕೆಂಡಿನ ಒಂದು ಆಡಿಯೋ ಕ್ಲಿಪ್ ಬಹಿರಂಗವಾಗಿದೆ. ಜಯಾ ಸಾವಿನ ತನಿಖೆ ನಡೆಸುತ್ತಿರುವ ಆರ್ಮುಗಸ್ವಾಮಿ ಆಯೋಗವೇ ಅಧಿಕೃತವಾಗಿ ಜನರ ಅವಗಾಹನೆಗಾಗಿ ದಾಖಲೆಗಳನ್ನು ಶನಿವಾರ ಬಹಿರಂಗಪಡಿಸಿದೆ.
ಸೆ.22, 2016ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಾ, ಅದಕ್ಕೂ ಕೆಲವು ದಿನ ಮೊದಲು (2.8.2016ರಂದು) ಊಟದ ಮೆನುವಿನ ಟಿಪ್ಪಣಿಯೊಂದನ್ನು ಬರೆದಿದ್ದರು. ಅದರಲ್ಲಿ, ನಸುಕಿನ ಜಾವ 4.55ರಿಂದ ಸಂಜೆ 7.15ರವರೆಗೆ ಯಾವ್ಯಾವ ತಿಂಡಿ ಸೇವಿಸಬೇಕು? ಊಟ ಸೇವಿಸಬೇಕು ಎಂಬೆಲ್ಲ ವಿವರ ಇದೆ. ಕಾಗದದ ಮೇಲೆ 2.8.2016 ಎಂಬ ದಿನಾಂಕ ಕೂಡ ಉಂಟು. ಇದೇ ವೇಳೆ ಆಸ್ಪತ್ರೆಗೆ ದಾಖಲಾಗುವ ಹಲವು ದಿನ ಮುನ್ನ ವೈದ್ಯರ ಜತೆಗಿನ ಸಂಭಾಷಣೆ ಕೂಡ ಧ್ವನಿಮುದ್ರಿತವಾಗಿತ್ತು. ಈ ದಾಖಲೆಗಳನ್ನು ಜಯಲಲಿತಾ ಅವರ ವೈದ್ಯ ಡಾ. ಶಿವಕುಮಾರ್ ಅವರು ತನಿಖಾ ಆಯೋಗಕ್ಕೆ ಹಸ್ತಾಂತರಿಸಿದ್ದರು. ಅವನ್ನು ಈಗ ಆರ್ಮುಗಸ್ವಾಮಿ ಆಯೋಗ ಬಹಿರಂಗಪಡಿಸಿದೆ.
ಡಾ. ಶಿವಕುಮಾರ್ ಅವರು ಜಯಾ ಗೆಳತಿ ವಿ.ಕೆ. ಶಶಿಕಲಾ ಅವರ ಬಂಧುವೂ ಹೌದು.
ಜಯಾ ಊಟದ ಮೆನುವಿನಲ್ಲೇದೆ?:
- ತೂಕ 106 ಕೇಜಿ
- ಬೆಳಗ್ಗೆ 4.55: ಕಮಲದ ನೀರು ಸೇವನೆ
- ಬೆಳಗ್ಗೆ 5.05ರಿಂದ 5.35: ಒಂದೂವರೆ ಇಡ್ಲಿ, 4 ಬ್ರೆಡ್ ಪೀಸುಗಳು, 400 ಎಂ.ಎಲ್. ಕಾಫಿ, 230 ಎಂ.ಎಲ್. ಎಳನೀರು.
- ಬೆಳಗ್ಗೆ 5.45: 200 ಎಂ.ಎಲ್. ಹಸಿರು ಚಹಾ
- ಬೆಳಗ್ಗೆ 8.55: ಒಂದು ಸೇಬು ಹಣ್ಣು
- ಬೆಳಗ್ಗೆ 9.40: 120 ಎಂ.ಎಲ್. ಕಾಫಿ, 5 ಬೋರ್ಬನ್ ಬಿಸ್ಕೀಟು
- ಬೆಳಗ್ಗೆ 11.35: 1 ಕಪ್ ಬಾಸ್ಮತಿ ಅನ್ನ
- ಮಧ್ಯಾಹ್ನ 2.35: ಅರ್ಧ ಕಪ್ ಬಾಸ್ಮತಿ ಅನ್ನ, ಮೊಸರು, 1 ಬಟ್ಟಲು ಕರಬೂಜ
- ಮಧ್ಯಾಹ್ನ 2.45: ಜನೂವಿಯಾ ಮಾತ್ರೆ ಸೇವನೆ
- ಸಂಜೆ 5.45: 200 ಎಂ.ಎಲ್. ಕಾಫಿ
- ಸಂಜೆ 7.25: 1 ಕಪ್ ಉಪ್ಪಿಟ್ಟು, 1 ದೋಸೆ, 2 ಬ್ರೆಡ್ ಪೀಸು, 200 ಎಂ.ಎಲ್. ಹಾಲು, ಅರ್ಧ ಕಪ್ ಒಣಹಣ್ಣು ಹಾಗೂ ಆಕ್ರೋಟು, 25 ಎಂಜಿ ಡೋಸ್‌ನ ಮಿಂಗರ್ ಡಯಾಬಿಟಿಕ್ ಔಷಧ, 50 ಎಂಜಿ ಜನೂವಿಯಾ ಮಾತ್ರೆ
ಆಡಿಯೋದಲ್ಲೇನಿದೆ?
52 ಸೆಕೆಂಡಿನ ಆಡಿಯೋದಲ್ಲಿ ಜಯಲಲಿತಾ ಅವರು ಕೆಮ್ಮುತ್ತಿರುವುದು ಕೇಳಿಬರುತ್ತದೆ. ತಮ್ಮ ರಕ್ತದೊತ್ತಡ ವಿಷಯವಾಗಿ ಮಾತನಾಡುವ ಅವರು, ಕಳೆದ ಬಾರಿ ಪರೀಕ್ಷೆಗೆ ಬರಲಾಗಲಿಲ್ಲ ಎಂದು ವಿಷಾದ ವ್ಯಕ್ತ ಪಡಿಸುವುದು ಕೇಳಿಸುತ್ತದೆ. ಇದಲ್ಲದೆ, ‘ನನ್ನ ರಕ್ತದೊತ್ತಡ ಪರೀಕ್ಷಿಸುವ ಯಂತ್ರವು ಸಿನಿಮಾದಲ್ಲಿ ಮೊದಲ ಸಾಲಿನಲ್ಲಿ ಕುಳಿತು ಶಿಳ್ಳೆ ಹೊಡೆಯುವವರ ಹಾಗೆ ಶಬ್ದ ಮಾಡುತ್ತಿದೆ’ ಎಂದು ಮಾಜಿ ನಟಿಯೂ ಆದ ಜಯಲಲಿತಾ ತಮಾಷೆ ಮಾಡುತ್ತಿರುವುದು ಕೇಳಿಬರುತ್ತದೆ. ಆಗ ವೈದ್ಯರು ‘ನಿಮ್ಮ ಬೀಪಿ 140/80 ಇದೆ’ ಎಂದಾಗ, ‘ಹೌದಾ.. ಅದು ನಾರ್ಮಲ್’ ಎಂದು ನಿರಾಳರಾಗುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.