
ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ರಾವಣನ ವಿರುದ್ಧ ಹೋರಾಡಿ ಮಡಿದ ಜಟಾಯು ಹಕ್ಕಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗಲೂ ಈ ಜೀವಸಂಕುಲ ಜೀವಂತವಾಗಿದೆ. ಉದ್ದನೆಯ ಕೊಕ್ಕು, ವಿಶಾಲವಾದ ರೆಕ್ಕೆಗಳಿರುವ ಈ ಹಕ್ಕಿಯನ್ನು ಉತ್ತರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಸುದ್ದಿಯೊಂದು ಆನ್ ಲೈನ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ಜಟಾಯು ಜಾತಿಯ ಹಕ್ಕಿಯೊಂದು ನೀರಿನಲ್ಲಿ ಮುಳುಗಿದಾಗ ಸಿಕ್ಕಿದೆ. ಅದನ್ನು ಮುಸ್ಲಿಂ ಕುಟುಂಬವೊಂದು ಸೆರೆಯಲ್ಲಿ ಇಟ್ಟುಕೊಂಡಿದೆ. ಹಕ್ಕಿಯ ಕಾಲಿಗೆ ಸರಪಳಿ ಕಟ್ಟಲಾಗಿದೆ. ಜಟಾಯು ಪಕ್ಷಿಯನ್ನು ರಕ್ಷಿಸಲು ವಿಡಿಯೋವನ್ನು ತಪ್ಪದೇ ಶೇರ್ ಮಾಡಿ. ಜಟಾಯು ಪಕ್ಷಿಯ ಬಗ್ಗೆ ರಾಮಾಯಣದಲ್ಲಿ ಕೇಳಿದ್ದೀರಿ. ಈಗ ಅದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಕ್ಕಿದೆ. ಹೀಗಾಗಿ ಈ ಪಕ್ಷಿಯನ್ನು ಹೇಗಾದರೂ ಮಾಡಿ ರಕ್ಷಿಸಬೇಕಿದೆ ಎಂದ ಸಂದೇಶ
ಜಾಲತಾಣಗಳಲ್ಲಿ ಕೆಳೆದ ಕೆಲ ದಿನಗಳಿಂದ ವೈರಲ್ ಆಗಿದೆ. ಜನರಿಗೂ ಈ ಬಗ್ಗೆ ನಂಬಿಕೆ ಬರುತ್ತಿಲ್ಲ. ಈ ಪಕ್ಷಿ ನಿಜವಾಗಿಯೂ ರಾಮಾಯಣದ ಜಟಾಯುವೇ? ಅದು ಸೆರೆ ಸಿಕ್ಕಿದ್ದು ಹೇಗೆ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಜಟಾಯುವನ್ನು ಬಂಧಿಸಲಾಗಿದೆ ಎನ್ನಲಾದ ಮುರಾದಾಬಾದ್‌ನ ಬೆನ್ಸಿಯಾ ಗ್ರಾಮಕ್ಕೆ ಮಾಧ್ಯಮ ತಂಡವೊಂದು ತೆರಳಿದಾಗ ನಿಜ ಸಂಗತಿ ಬಯಲಾಗಿದೆ.
ವಿಡಿಯೋದಲ್ಲಿ ಕಾಣುತ್ತಿರುವ ಪಕ್ಷಿ ಜಟಾಯು ಅಲ್ಲ. ಅದು ಗಿದ್ ಎಂಬ ಹದ್ದಿನ ಜಾತಿಯ ಪಕ್ಷಿಯಾಗಿದೆ. 2011ರಲ್ಲಿ ರೈಲ್ವೆ ಹಳಿಯೊಂದರ ಪಕ್ಕ ಗಾಯಗೊಂಡು ನೀರಿನಲ್ಲಿ ಬಿದ್ದಿದ್ದ ಈ ಹಕ್ಕಿಯನ್ನು ಮುಫಿಜುರ್ ರೆಹಮಾನ್ ಎಂಬಾತನ ಪುತ್ರ ಮನೆಗೆ ತಂದು ಬಂಧಿಸಿಟ್ಟಿದ್ದ. ವೈರಲ್ ಆಗಿರುವ ಈ ವಿಡಿಯೋ ಆ ಸಮಯದ್ದಾಗಿದೆ. ಹೀಗಾಗಿ ಅದು ಜಟಾಯು ಎಂಬುದು ಸುಳ್ಳು ಎಂಬುದು ಸಾಬೀತಾಗಿದೆ.
(ಕನ್ನಡಪ್ರಭ ವೈರಲ್'ಚೆಕ್ ಕಾಲಂ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.