ಸರ್ಕಾರ ಪತನದ ಸೂಚನೆ ನೀಡಿದರಾ ಕಾಂಗ್ರೆಸ್ ಶಾಸಕ?

By Web DeskFirst Published Sep 17, 2018, 7:37 AM IST
Highlights

ಒಂದು ವೇಳೆ ರಾಜ್ಯದಲ್ಲಿ ಸರ್ಕಾರ ಪತನವಾದಲ್ಲಿ ಅದಕ್ಕೆ ನಾವು ಯಾವುದೇ ಕಾರಣಕ್ಕೂ ಕೂಡ ಹೊಣೆಗಾರರಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಬೆಳಗಾವಿ: ಸಮ್ಮಿಶ್ರ ಸರ್ಕಾರ ಬಿದ್ದರೆ ಅದಕ್ಕೆ ಸತೀಶ್ ಜಾರಕಿಹೊಳಿ ಆಗಲಿ, ರಮೇಶ್ ಜಾರಕಿಹೊಳಿ ಆಗಲಿ ಕಾರಣವಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ ನೀಡುವ ಮೂಲಕ ಮೈತ್ರಿ ಸರ್ಕಾರ ಪತನವಾದರೂ ಆಗಬಹುದು ಎಂಬ ಸೂಚನೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಸಮಸ್ಯೆ ಉದ್ಭವಿಸುವುದು ಅದನ್ನು ಹಿರಿಯ ನಾಯಕರು ಸರಿಪಡಿಸುವುದು ಸಾಮಾನ್ಯ. ಅದರಂತೆ ಸಿದ್ದರಾಮಯ್ಯ, ವೇಣುಗೋಪಾಲ ಬರುವುದು ಮತ್ತು ಸಭೆ ಮಾಡುವುದು ಸಹಜ.  ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿನ ಸಮಸ್ಯೆಗಳನ್ನು ಅವರು ಸರಿ ಮಾಡುತ್ತಾರೆ. ಆದಾಗ್ಯೂ ಸರ್ಕಾರ ಪತನಗೊಂಡರೆ ಅದಕ್ಕೆ ನಾವು ಕಾರಣವಲ್ಲ ಎಂದು ಪುನರುಚ್ಚರಿಸಿದರು. 

ಸಿದ್ದರಾಮಯ್ಯ ಅವರಿಗೆ ಹೀಗೆ ಮಾಡಿ, ಹಾಗೆ ಮಾಡಬೇಡಿ ಎಂದು ಹೇಳುವಂತಹ ಪ್ರಶ್ನೆಯೇ ಇಲ್ಲ. ನಾಳೆ ಸಮ್ಮಿಶ್ರ ಸರ್ಕಾರ ಪತನವಾದ್ರೆ  ನಾವೇನು ಮಾಡಲು ಆಗುತ್ತೆ. ಆಪರೇಷನ್ ಕಮಲ ನಡೆದಿರಬಹುದು. ಈ ಹಿಂದೆ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಿದ್ದು, ಇದೀಗ ಮರಳಿ ಬಂದಿದ್ದಾರೆ. ಹಾಗೆಯೇ ಬೇರೆ ಯಾರಾದರೂ ಹೋದಲ್ಲಿ ನಾವು ಏನು ಮಾಡಲು ಸಾಧ್ಯ. ದುಡ್ಡಿನ ಆಸೆ ತೋರಿಸಿ ಶಾಸಕರನ್ನು  ಸೆಳೆಯುವುದು ಆಗಿರಬಹುದಲ್ಲವೇ? ಹೋದರೂ ಹೋಗಬಹುದು ಎಂದರು.

ಹಾಗೆಯೇ ಬೇರೆ ಯಾರಾದರೂ ಹೋದಲ್ಲಿ ನಾವು ಏನು ಮಾಡಲು ಸಾಧ್ಯ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ಸರ್ಕಾರ ಪತನವಾದರೂ ಆಗಬಹುದು ಎಂಬ ಸೂಚನೆ ನೀಡಿದ್ದಾರೆ.

click me!