20 ಶಾಸಕರು ಕಾಂಗ್ರೆಸ್ ಗೆ ಕೈ ಕೊಡಲು ರೆಡಿ?

Published : Sep 17, 2018, 07:23 AM ISTUpdated : Sep 19, 2018, 09:27 AM IST
20 ಶಾಸಕರು ಕಾಂಗ್ರೆಸ್ ಗೆ ಕೈ ಕೊಡಲು ರೆಡಿ?

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಈಗಾಗಲೇ ದಿನದಿನಕ್ಕೂ ಕೂಡ ವಿವಿಧ ರೀತಿಯ ಬೆಳವಣಿಗೆಗಳು ಆಗುತ್ತಿದೆ. ಇದೇ ವೇಳೆ ಸುಮಾರು 20 ಕಾಂಗ್ರೆಸ್ ಶಾಕರು ಪಕ್ಷಕ್ಕೆ ಕೈ ಕೊಡಲು ಸಜ್ಜಾಗಿದ್ದಾರೆ  ಎಂದು ಹೇಳಲಾಗುತ್ತಿದೆ. 

ಬೆಂಗಳೂರು: ಬಿಜೆಪಿಯಿಂದ ನಡೆಯುತ್ತಿದೆ ಎನ್ನಲಾದ ‘ಆಪರೇಷನ್ ಕಮಲ’ದ ಫಲಿತಾಂಶ ಬರುವ ಮೂರ್ನಾಲ್ಕು ದಿನಗಳಲ್ಲಿ ಹೊರಬೀಳಲಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿದ್ದು, ಪಕ್ಷದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಶಾಸಕ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಇದರ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. 

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ಸೇರಿದಂತೆ ಕೆಲವೇ ಕೆಲವು ನಾಯಕರಿಗೆ ಹೊರತುಪಡಿಸಿ ಈ ಆಪರೇಷನ್ ಕಮಲದ  ಬಗ್ಗೆ ಪಕ್ಷದ ಇತರ ಯಾವುದೇ ಹಿರಿಯ ನಾಯಕರಿಗೂ ಮಾಹಿತಿಯೂ ಇಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕು ಎಂಬ ಗುರಿ ಹೊಂದಿರುವ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದಲ್ಲಿನ ಅತೃಪ್ತ ಶಾಸಕರು ತಾವಾಗಿಯೇ  ಹೊರಬಂದಲ್ಲಿ ಸರ್ಕಾರ ರಚಿಸುವ ಪ್ರಯತ್ನ ಮಾಡೋಣ ಎಂಬ ಮಾತನ್ನು ಹೇಳಿದ್ದರು. 

ತಮ್ಮ ಸೋಲಿಗೆ ಕಾರಣರಾದರು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಕೆ.ಶಿವಕುಮಾರ್ ವಿರುದ್ಧ ಹರಿಹಾಯುತ್ತಿರುವ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಯಡಿಯೂರಪ್ಪ ಅವರ ಮಾತನ್ನು ಆಧರಿಸಿ ಕಾಂಗ್ರೆಸ್‌ನಲ್ಲಿಯ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 

20 ಶಾಸಕರು ‘ಕೈ’ಕೊಡಲು ರೆಡಿ?: ಯಡಿಯೂರಪ್ಪ ಬಣದ ಮೂಲಗಳ ಪ್ರಕಾರ, ಸುಮಾರು 20 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಲು ಸಜ್ಜಾಗಿದ್ದಾರೆ. ಅದಕ್ಕೆ ಬೇಕಾದ ಪ್ರಕ್ರಿಯೆ ನಡೆಯುತ್ತಿದೆ. ಸಿದ್ಧತೆಗಳೂ ಆಗಿವೆ. ಮೂರ್ನಾಲ್ಕು ದಿನಗಳಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಕ್ಷಿಪ್ರ ರಾಜಕೀಯ ಕ್ರಾಂತಿಗೆ ನಾಂದಿ ಹಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಯೋಗೇಶ್ವರ್ ಅವರ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿದ್ದರು. 

ಜೊತೆಗೆ ನಾಲ್ವರು ಕಿಂಗ್‌ಪಿನ್‌ಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅಚ್ಚರಿಯ ಸಂಗತಿ ಎಂದರೆ, ಭಾನುವಾರ ಬಿಜೆಪಿ ಶಾಸಕರಾದ ಯೋಗೇಶ್ವರ್ ಮತ್ತು ಅಶ್ವತ್ಥನಾರಾಯಣ ಅವರು ಕಿಂಗ್‌ಪಿನ್‌ಗಳು ಎನ್ನಲಾದ ನಾಲ್ವರ ಪೈಕಿ ಇಬ್ಬರ ಜೊತೆ ಹಾಸನ ಜಿಲ್ಲೆಯ ಅರಸೀಕೆರೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಒಟ್ಟಿಗೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೂ ಭಾಗವಹಿಸಿದ್ದರು. ಒಟ್ಟಿನಲ್ಲಿ ಯಡಿಯೂರಪ್ಪ ಅವರ ಆಪ್ತರ ಪ್ರಕಾರ, ಶೀಘ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?