ಕೇರಳ ರಾಜಕೀಯಕ್ಕೆ ಜನಾರ್ದನ ರೆಡ್ಡಿ ಎಂಟ್ರಿ

Published : Jun 29, 2017, 09:24 AM ISTUpdated : Apr 11, 2018, 01:07 PM IST
ಕೇರಳ ರಾಜಕೀಯಕ್ಕೆ ಜನಾರ್ದನ ರೆಡ್ಡಿ ಎಂಟ್ರಿ

ಸಾರಾಂಶ

ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಗಾಲಿ ಜನಾರ್ದನರೆಡ್ಡಿ ಅವರು ಕೇರಳ ರಾಜ್ಯದ ರಾಜಕಾರಣದತ್ತ ದೃಷ್ಟಿಹಾಯಿಸಿದ್ದಾರೆ.

ಬೆಂಗಳೂರು(ಜೂ.29): ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಗಾಲಿ ಜನಾರ್ದನರೆಡ್ಡಿ ಅವರು ಕೇರಳ ರಾಜ್ಯದ ರಾಜಕಾರಣದತ್ತ ದೃಷ್ಟಿಹಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್‌ ಸಿದ್ಧಾಂತದೊಂದಿಗಿನ ಸಂಘರ್ಷದ ಪರಿಣಾಮ ಹತ್ಯೆಯಾಗಿರುವ ಹತ್ತಾರು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಠಿಹಾಗೂ ಕಾರ್ಯಕರ್ತರ ಕುಟುಂಬಗಳಿಗೆ ಪರಿಹಾರದ ನೆರವು ನೀಡುವ ಬಗ್ಗೆ ರೆಡ್ಡಿ ಗಂಭೀರ ಚಿಂತನೆ ನಡೆಸಿದ್ದು, ಅಂಥವರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಳ್ಳುವುದೂ ಸೇರಿದಂತೆ ಸಮಗ್ರ ಪರಿಹಾರದ ರೂಪರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೆಡ್ಡಿ ಅವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಹೆಚ್ಚು ನಂಬಿಕೆ ಉಳ್ಳವರು. ಹೀಗಾಗಿಯೇ ದೇವರನಾಡು ಎಂದೇ ಹೆಸರು ಗಳಿಸಿರುವ ಕೇರಳದ ಬಗ್ಗೆ ವಿಶೇಷ ಆಸಕ್ತಿ ಮತ್ತು ಆಸ್ಥೆ ವಹಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗದಿದ್ದರೂ ಹಿಂದಿನಿಂದಲೂ ಕೌಟುಂಬಿಕವಾಗಿ ಹಾಗೂ ರಾಜಕೀಯವಾಗಿ ನಂಟು ಹೊಂದಿರುವ ಆಂಧ್ರಪ್ರದೇಶ ಅಥವಾ ತೆಲಂಗಾಣದ ರಾಜಕಾರಣದಲ್ಲಿ ರೆಡ್ಡಿ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದರೆ ಅದು ಅಚ್ಚರಿ ಎನಿಸುತ್ತಿರಲಿಲ್ಲ. ಆದರೆ, ಯಾವುದೇ ರೀತಿಯ ಸಂಬಂಧವಿರದ ಕೇರಳದಲ್ಲಿ ರೆಡ್ಡಿ ಆಸಕ್ತಿ ವಹಿಸಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

ರೆಡ್ಡಿ ಅವರು ಕೇರಳದಲ್ಲಿ ಹತರಾದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರಿಗೆ ಪರಿಹಾರ ನೀಡಲು ಮುಂದಾಗಿರುವ ಬಗ್ಗೆ ರಾಜ್ಯ ಬಿಜೆಪಿಯ ಇತರ ನಾಯಕರಿಗೆ ಯಾವುದೇ ರೀತಿಯ ಮಾಹಿತಿ ಅಥವಾ ಸುಳಿವು ಇಲ್ಲ. ಈ ಬಗ್ಗೆ ಖುದ್ದು ರೆಡ್ಡಿ ಆಪ್ತರು ಹೇಳುವುದು, ಪಕ್ಷದ ಹೈಕಮಾಂಡ್‌ ಅದರಲ್ಲೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಇಚ್ಛೆಯ ಮೇರೆಗೆ ಇಂಥದೊಂದು ಮಹತ್ತರ ಕೆಲಸಕ್ಕೆ ಕೈಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಮಲೆಯಾಳಿ ಕಲಿಯುತ್ತಿದ್ದಾರೆ.
ಇದೇ ತಿಂಗಳಲ್ಲಿ ಜನಾರ್ದನರೆಡ್ಡಿ ಅವರು ತಮ್ಮ ಆಪ್ತಮಿತ್ರ, ಸಂಸದ ಬಿ.ಶ್ರೀರಾಮುಲು ಅವರೊಂದಿಗೆ ಕೇರಳದ ಶಬರಿಮಲೆ ಕ್ಷೇತ್ರಕ್ಕೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಿದ್ದ ವೇಳೆ ಆ ರಾಜ್ಯದ ಬಿಜೆಪಿ ಮುಖಂಡರೊಂದಿಗೆ ಸುದೀರ್ಘ ಮಾತುಕತೆ ಯನ್ನೂ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಅದಾದ ನಂತರ ಬೆಂಗಳೂರಿಗೆ ವಾಪಸಾದ ಮೇಲೆ ತಮ್ಮ ಆಪ್ತರೊಂದಿಗೆ ರೆಡ್ಡಿ ಸಮಾಲೋಚನೆ ನಡೆಸಿದ್ದಾರೆ. ನಾನು ಈಗ ಎಲ್ಲವನ್ನೂ ನೋಡಿದ್ದೇನೆ. ಇರುವಷ್ಟುಕಾಲ ಒಳ್ಳೆಯ ಕೆಲಸ ಮಾಡಬೇಕು ಅಷ್ಟೆ. ಕೇರಳದಲ್ಲಿ ಕಮ್ಯುನಿಸ್ಟ್‌ರಿಂದ ನಮ್ಮ ಪಕ್ಷದ ಹಾಗೂ ಸಂಘ ಪರಿವಾರದ ಅನೇಕ ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳ ಸದಸ್ಯರಿಗೆ ಏನಾದರೂ ಸಹಾಯ ಮಾಡಿ ಪ್ರಾಣ ತೊರೆದವರ ಬಲಿದಾನ ವ್ಯರ್ಥವಾಗಿಲ್ಲ ಎಂಬ ಸಂದೇಶ ನೀಡಬೇಕು. ಇದಕ್ಕಾಗಿ ತಾವು ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂಬ ಮಾತನ್ನು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೀಘ್ರದಲ್ಲೇ ಜನಾರ್ದನರೆಡ್ಡಿ ಅವರು ಕೇರಳಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಅಲ್ಲಿನ ಬಿಜೆಪಿಯ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆ ಮಾತುಕತೆಯ ನಂತರ ಪರಿಹಾರದ ಸ್ವರೂಪ ಮತ್ತು ರೆಡ್ಡಿ ಅವರು ಕೇರಳ ರಾಜಕಾರಣದಲ್ಲಿ ವಹಿಸಬಹುದಾದ ಪಾತ್ರದ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!