ಬಾಲಾಕೋಟ್‌ನಲ್ಲಿ ಮತ್ತೆ ತಲೆ ಎತ್ತಿತು ಉಗ್ರಗಾಮಿಗಳ ಶಿಬಿರ!

By Kannadaprabha NewsFirst Published Sep 23, 2019, 8:53 AM IST
Highlights

ಪಾಕಿಸ್ತಾನದ ಬಾಲಾಕೋಟ್‌ ಭಯೋತ್ಪಾದಕರ ಶಿಬಿರ 7 ತಿಂಗಳ ಬಳಿಕ ಮತ್ತೆ ತಲೆ ಎತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ನವದೆಹಲಿ [ಸೆ.23]:  ಭಾರತೀಯ ಯುದ್ಧ ವಿಮಾನಗಳು ಅಂತಾರಾಷ್ಟ್ರೀಯ ಗಡಿ ದಾಟಿ ರಾತ್ರೋರಾತ್ರಿ ನಡೆಸಿದ ಬಾಂಬ್‌ ದಾಳಿಯಿಂದ ನಾಮಾವಶೇಷಗೊಂಡಿದ್ದ ಪಾಕಿಸ್ತಾನದ ಬಾಲಾಕೋಟ್‌ ಭಯೋತ್ಪಾದಕರ ಶಿಬಿರ 7 ತಿಂಗಳ ಬಳಿಕ ಮತ್ತೆ ತಲೆ ಎತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಗೆ ಸೇರಿದ ಶಿಬಿರ ಇದಾಗಿದ್ದು, ಜಮ್ಮು- ಕಾಶ್ಮೀರ ಹಾಗೂ ಭಾರತದ ವಿವಿಧೆಡೆ ದಾಳಿ ಮಾಡುವ ಸಲುವಾಗಿ ಇಲ್ಲಿ 40 ಉಗ್ರಗಾಮಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಸಮುದಾಯದ ಲಕ್ಷ್ಯ ಬೀಳದಂತೆ ನೋಡಿಕೊಳ್ಳಲು ಹೊಸ ಸಂಘಟನೆಯ ಹೆಸರಲ್ಲಿ ದಾಳಿಗೆ ಸಂಚು ನಡೆಯುತ್ತಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಕಾಶ್ಮೀರಕ್ಕೆ ಲಭಿಸುತ್ತಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ನಿಷ್ಕಿ್ರಯಗೊಳಿಸಿತ್ತು. ಆ ನಿರ್ಧಾರದ ಬಗ್ಗೆ ಆಕ್ರೋಶಗೊಂಡಿರುವ ಪಾಕಿಸ್ತಾನದ ಕೃಪಾಶೀರ್ವಾದದೊಂದಿಗೆ ಉಗ್ರ ಶಿಬಿರ ಮತ್ತೆ ತಲೆ ಎತ್ತಿದೆ ಎಂದು ವರದಿ ಹೇಳಿದೆ.

ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿ ಹಾಗೂ ಅದಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಬಾಲಾಕೋಟ್‌ ದಾಳಿಯ ನಂತರದಲ್ಲಿ ಪಾಕಿಸ್ತಾನದಲ್ಲಿನ ಭಾರತ ವಿರೋಧಿ ಉಗ್ರಗಾಮಿ ಸಂಘಟನೆಗಳು ತೆಪ್ಪಗಾಗಿದ್ದವು. ಆದರೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಈ ಸಂಘಟನೆಗಳು ಮತ್ತೆ ಸಕ್ರಿಯಗೊಂಡಿವೆ. ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಮುಫ್ತಿ ಅಬ್ದುಲ್‌ ರೌಫ್‌ ಅಸ್ಗರ್‌ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮಂಡ್ಯದ ವೀರ ಯೋಧ ಗುರು ಸೇರಿದಂತೆ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಪ್ರತೀಕಾರವಾಗಿ ಫೆ.27ರಂದು ಭಾರತೀಯ ವಾಯುಪಡೆ ವಿಮಾನಗಳು ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ಶಿಬಿರ ನಾಶ ಮಾಡಿದ್ದವು.

click me!