'ರಾಜ್ಯದಲ್ಲಿ ಜನರು ಕಣ್ಣೀರು ಹಾಕುತ್ತಿದ್ದಾರೆ, ಸಿಎಂ ಕುರ್ಚಿಗಾಗಿ ದೆಹಲಿಗೆ ಹೋಗಿದ್ದಾರೆ'

By Web DeskFirst Published Sep 23, 2019, 8:42 AM IST
Highlights

ಬಿಎಸ್‌ವೈಗೆ ಕುರ್ಚಿ ಮುಖ್ಯ, ರಾಜ್ಯದ ಜನರಲ್ಲ: ಗೌಡ ಕಿಡಿ| ರಾಜ್ಯದಲ್ಲಿ ಜನರು ಕಣ್ಣೀರು ಹಾಕುತ್ತಿದ್ದಾರೆ, ಸಿಎಂ ಕುರ್ಚಿಗಾಗಿ ದೆಹಲಿಗೆ ಹೋಗಿದ್ದಾರೆ

ಬೆಂಗಳೂರು[ಸೆ.23]: ರಾಜಕಾರಣಿಗೆ ಕುರ್ಚಿ ಮುಖ್ಯವಾದಾಗ ರಾಜ್ಯದ ಜನರು ನೆನಪಿಗೆ ಬರುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕುರ್ಚಿ ಅನಿವಾರ್ಯವಾಗಿದ್ದರಿಂದ ದೆಹಲಿಗೆ ತೆರಳಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಭಾನುವಾರ ನಡೆದ ತುಮಕೂರು ಜಿಲ್ಲೆಯ ಶಾಸಕರ ಮತ್ತು ಮುಖಂಡರ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುರ್ಚಿ ಮುಖ್ಯವಾದಾಗ ರಾಜ್ಯದ ಜನತೆ ಮುಖ್ಯವಾಗುವುದಿಲ್ಲ. ಜನತೆ ನೆನಪಿಗೂ ಬರುವುದಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ ಇಂತಹ ಕೆಟ್ಟದುಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಜನರು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಡಿಯೂರಪ್ಪ ಹೇಗೆ ಕುರ್ಚಿ ಉಳಿಸಿಕೊಳ್ಳಬೇಕು ಎಂಬ ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿ ಅವರು ದೆಹಲಿಗೆ ಹೋಗಿದ್ದಾರೆ ಎಂದು ಹರಿಹಾಯ್ದರು.

ಸಂಕಷ್ಟದಲ್ಲಿರುವ ಜನರ ಸಮಸ್ಯೆ ಪರಿಹಾರಕ್ಕೆ ಅವರು ಗಮನ ಹರಿಸುತ್ತಿಲ್ಲ. ಬದಲಿಗೆ ಹೈಕಮಾಂಡ್‌ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಕುರ್ಚಿಯ ಅಭದ್ರತೆ ಕಾಡಿದ ಕಾರಣಕ್ಕಾಗಿ ವರಿಷ್ಠರನ್ನು ಭೇಟಿ ಮಾಡಲು ಹೋಗಿದ್ದಾರೆ. ಅನರ್ಹಗೊಂಡಿರುವ ಶಾಸಕರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದ ಅವರು, ಹೈಕೋರ್ಟ್‌ ಆದೇಶವಿದ್ದರೂ ಕಾಂಗ್ರೆಸ್‌ ಸ್ನೇಹಿತರ ತೃಪ್ತಿಗೋಸ್ಕರ ಮಂಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಒಬ್ಬರನ್ನು ಅಮಾನತು ಮಾಡಲಾಗಿದೆ.

ಬೆಳಗ್ಗೆ ಕಾಂಗ್ರೆಸ್‌, ಮಧ್ಯಾಹ್ನ ಬಿಜೆಪಿಗೆ ಹೋಗುವವರು ಮಂಡ್ಯದಲ್ಲಿ ತುಂಬಾ ಜನ ಇದ್ದಾರೆ. ಅವರ ತೃಪ್ತಿಗಾಗಿ ಅಮಾನತುಗೊಳಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಈ ವಿಚಾರವಾಗಿ ಧನ್ಯವಾದ ಹೇಳಬೇಕು ಎಂದು ಅನರ್ಹ ಶಾಸಕ ನಾರಾಯಣಗೌಡ ಮತ್ತು ಮಾಜಿ ಶಾಸಕ ಚಲುವರಾಯಸ್ವಾಮಿ ಹೆಸರು ಪ್ರಸ್ತಾಪಿಸದೆ ಕಿಡಿಕಾರಿದರು.

click me!