
ಅಧ್ಯಾತ್ಮದ ಬಗ್ಗೆ ಮಾತನಾಡುವಾಗಲೆಲ್ಲ ಜನರು ಹುಡುಕಾಟ ಎಂಬ ಪದ ಬಳಸುತ್ತಾರೆ. ಯಾವುದರ ಹುಡುಕಾಟ ಎಂದು ಕೇಳಿದರೆ, ದೇವರು, ಸತ್ಯ, ಜೀವನದ ರಹಸ್ಯ, ಸಂತೋಷ ಹೀಗೆ ಏನೇನೋ ಹೇಳುತ್ತಾರೆ. ಸಮಸ್ಯೆ ಏನೆಂದರೆ ನಾವೆಲ್ಲ ಜೀವನದ ಬಗ್ಗೆ ಮೊದಲೇ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದೇವೆ. ಅದೇ ನಮ್ಮ ಪರಮ ಗುರಿ ಎಂದುಕೊಂಡು ಅದರ ಹುಡುಕಾಟದಲ್ಲಿ ತೊಡಗಿದ್ದೇವೆ.
ದೇವರು ಕೂಡ ಒಂದು ನಿರ್ಧಾರವೇ. ಆದರೆ, ಯಾರಿಗೂ ದೇವರಿದ್ದಾನೋ ಇಲ್ಲವೋ ಎಂಬುದು ನಿಜವಾಗಿ ಗೊತ್ತಿಲ್ಲ. ಯಾರು ದೇವರು? ಎಲ್ಲಿದ್ದಾನೆ ಅವನು? ಮೇಲಿದ್ದಾನೆಯೇ? ಯಾವುದು ಮೇಲೆ? ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಇದ್ದುದರಿಂದ ನಾನು ದೇವಸ್ಥಾನಗಳಿಗೇ ಹೋಗುತ್ತಿರಲಿಲ್ಲ. ಅಪ್ಪ ಅಮ್ಮ ದೇವಸ್ಥಾನಕ್ಕೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋದರೂ ನಾನು ಹೊರಗೇ ನಿಲ್ಲುತ್ತಿದ್ದೆ.
ಎಲ್ಲಿಗಾದರೂ ಓಡಿ ಹೋದೇನು ಎಂದು ಚಪ್ಪಲಿ ಕಾಯುವವನ ಬಳಿ ನನ್ನನ್ನು ಒಪ್ಪಿಸಿ ಹೋಗುತ್ತಿದ್ದರು. ನಂತರದ ವರ್ಷಗಳಲ್ಲಿ ಒಂದು ಸತ್ಯ ನನಗೆ ಹೊಳೆಯಿತು. ಅದೇನೆಂದರೆ, ದೇವಸ್ಥಾನದಿಂದ ಹೊರಬರುವವರ ಮುಖದಲ್ಲಿರುವುದಕ್ಕಿಂತ ಹೆಚ್ಚು ಸಂತೋಷ ಹೋಟೆಲ್‌ನಿಂದ ಹೊರ ಬರುವವರಲ್ಲಿ ಇರುತ್ತದೆ! ಅದೃಷ್ಟವಶಾತ್ ನನಗೇನೂ ಗೊತ್ತಿಲ್ಲ ಎಂಬುದು ಬಹಳ ಮೊದಲೇ ನನಗೆ ಗೊತ್ತಾಯಿತು. ಹಾಗಾಗಿ ಕಣ್ಣುಬಿಟ್ಟಾಗ ಜಗತ್ತು ಬಹಳ
ಸುಂದರವಾಗಿ ಕಾಣಿಸಿತು. ಸುಮ್ಮನೇ ನೋಡುತ್ತಾ ಹೋದೆ. ತಮಾಷೆಯೆಂದರೆ, ನನಗೆ ತಲೆ ಕೆಟ್ಟಿದೆ, ಚಿಕಿತ್ಸೆ ಕೊಡಿಸಬೇಕು ಎಂದು ನನ್ನ ಡಾಕ್ಟರ್ ಅಪ್ಪನಿಗೆ ಅನ್ನಿಸಿತ್ತು. ಹೀಗೆ ಉದ್ದೇಶವಿಲ್ಲದೆ ಜಗತ್ತನ್ನು ನೋಡುವ ಸಾಮರ್ಥ್ಯವೇ ಇಂದು ಕಾಣೆಯಾಗಿದೆ. ಜಗತ್ತನ್ನು ತಿಳಿದುಕೊಳ್ಳುವುದಕ್ಕೆ ‘ನನಗೆ ಗೊತ್ತಿಲ್ಲ’ ಎಂಬ ತಿಳಿವಳಿಕೆಯೇ ಏಕೈಕ ಬಾಗಿಲು ಎಂಬುದನ್ನು ಬಹಳ ಜನರು ಮರೆತುಬಿಟ್ಟಿದ್ದಾರೆ. ಅಧ್ಯಾತ್ಮ ಅಂದರೆ ದೇವರನ್ನಾಗಲೀ, ಸತ್ಯವನ್ನಾಗಲೀ ಅಥವಾ ಬದುಕಿನ ಉದ್ದೇಶವನ್ನಾಗಲೀ ಹುಡುಕುವುದಲ್ಲ. ಇದು ನಮ್ಮ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳುವ ಸಾಧನ. ನಾನು ಯಾವತ್ತೂ ಜೀವನದಲ್ಲಿ ಏನನ್ನೂ ನಿರೀಕ್ಷಿಸಿಲ್ಲ. ಯಾವುದನ್ನೂ ಹುಡುಕಿಲ್ಲ. ಸುಮ್ಮನೆ ನೋಡುತ್ತಾ ಬಂದಿದ್ದೇನೆ. ಅಧ್ಯಾತ್ಮ ಅಂದರೆ ಏನೆಂದು ನಿಮಗೆ ತಿಳಿಯಬೇಕಾ? ಯಾವುದನ್ನೂ ಹುಡುಕಬೇಡಿ. ಸುಮ್ಮನೆ ನೋಡುವುದನ್ನು ಕಲಿಯಿರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.