ಭಾರತದ ಮೇಲೆ ಕಣ್ಣಿಡಲಿದೆ ‘ಹೈಸಿಸ್‌’

By Web Desk  |  First Published Nov 30, 2018, 9:46 AM IST

ಭಾರತದ ಮೇಲೆ ‘ಹೈಸಿಸ್‌’ ಕಣ್ಣು!  ಅತ್ಯುತ್ಕೃಷ್ಟ  ಕ್ಯಾಮೆರಾ ಹೊಂದಿದ ಇಸ್ರೋ ಉಪಗ್ರಹ ಉಡಾವಣೆ |  ಭೂಮಿಯ ಮೇಲಿನ ಸುಸ್ಪಷ್ಟ ಚಿತ್ರ ಸೆರೆಹಿಡಿಯವ ಉಪಗ್ರಹ | ಇದರ ಜತೆಗೆ 30 ದೇಶಗಳ ಸ್ಯಾಟಲೈಟ್‌ ಯಶಸ್ವಿಯಾಗಿ ಕಕ್ಷೆಗೆ


ಶ್ರೀಹರಿಕೋಟಾ (ನ. 30): ಭಾರತ ಉಪಖಂಡದ ಮೇಲೆ ಹದ್ದಿನಗಣ್ಣಿಟ್ಟು, ತನ್ನ ಅತ್ಯುತ್ಕೃಷ್ಟಕೆಮೆರಾ ಮೂಲಕ ಹೈ ರೆಸಲ್ಯೂಷನ್‌ ಫೋಟೋಗಳನ್ನು ಸೆರೆ ಹಿಡಿಯುವ ಭೂ ಸರ್ವೇಕ್ಷಣಾ ಉಪಗ್ರಹ ‘ಹೈಸಿಸ್‌’ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಜತೆಗೆ ಕಕ್ಷೆಗೆ ಸೇರಿಸುವಲ್ಲಿಯೂ ಸಫಲತೆ ಸಾಧಿಸಿದೆ.

 



🇮🇳 Mission Accomplished! 🇮🇳
Thank You for your support. pic.twitter.com/8K8Z7fdDJV

— ISRO (@isro)

Latest Videos

undefined

ಹೈಪರ್‌ ಸ್ಪೆಕ್ಟ್ರಲ್‌ ಇಮೇಜಿಂಗ್‌ ಸ್ಯಾಟಲೈಟ್‌ (ಹೈಸಿಸ್‌) ಎಂಬ ಹೆಸರಿನ ಉಪಗ್ರಹ ಇದಾಗಿದೆ. ಭಾರತದ ನೆಚ್ಚಿನ ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಇತರೆ 30 ಉಪಗ್ರಹಗಳ ಜತೆ ಇಟ್ಟು ಗುರುವಾರ ಬೆಳಗ್ಗೆ 9.57ಕ್ಕೆ ಹೈಸಿಸ್‌ ಉಡಾವಣೆ ಮಾಡಲಾಗಿದೆ. ಶ್ರೀಹರಿಕೋಟಾದಿಂದ ಚಿಮ್ಮಿದ ಬಳಿಕ 17 ನಿಮಿಷ 27 ಸೆಕೆಂಡ್‌ಗಳಲ್ಲಿ ಹೈಸಿಸ್‌ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದೆ.

ತದನಂತರ ಉಳಿದ 30 ಉಪಗ್ರಹಗಳನ್ನು ಕಕ್ಷೆಗೆ ಸೇರ್ಪಡೆಗೊಳಿಸಲಾಗಿದೆ. ಈ 30 ಉಪಗ್ರಹಗಳಲ್ಲಿ ಹೆಚ್ಚಿನವು ನಾಸಾದಂತಹ ದೈತ್ಯ ಸಂಸ್ಥೆ ಹೊಂದಿರುವ ಅಮೆರಿಕದವು ಎಂಬುದು ಇಸ್ರೋ ಹಿರಿಮೆಗೆ ಸಾಕ್ಷಿ.

ಇಸ್ರೋ ಉಡಾವಣೆ ಮಾಡಿರುವ ಹೈಸಿಸ್‌ ಉಪಗ್ರಹ ಭಾರತದ ಪಾಲಿಗೆ ದೊಡ್ಡ ಆಸ್ತಿ. ಈ ಉಪಗ್ರಹ ಅತ್ಯಧಿಕ ರೆಸಲ್ಯೂಷನ್‌ನ ಕೆಮೆರಾ ಹೊಂದಿದ್ದು, ಅದು ಭೂಮಿಯ ಸುಸ್ಪಷ್ಟಚಿತ್ರಗಳನ್ನು ಸೆರೆಹಿಡಿಯಲಿದೆ. ಈ ಚಿತ್ರಗಳನ್ನು ಬಳಸಿಕೊಂಡು ಕೃಷಿ, ಅರಣ್ಯ, ಮಣ್ಣಿನ ಪರೀಕ್ಷೆ, ಭೂಗರ್ಭ, ಕರಾವಳಿ ವಲಯ ಅಧ್ಯಯನ, ಒಳನಾಡ ಜಲ ಅಧ್ಯಯನ, ಪರಿಸರ ನಿಗಾ ಹಾಗೂ ಕೈಗಾರಿಕೆಗಳಿಂದ ಆಗುವ ಮಾಲಿನ್ಯವನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ. ಈ ಉಪಗ್ರಹ ಆಗಸದಲ್ಲಿ ಭಾರತದ ಮೇಲಿನ ಕಣ್ಣಿನಂತೆ ನಿಗಾ ಇಡಲಿದೆ.

ಈ ಉಪಗ್ರಹ ಯಶಸ್ವಿ ಉಡಾವಣೆಯಿಂದ ಹೊಸ ಹುಮ್ಮಸ್ಸು ಗಳಿಸಿರುವ ಇಸ್ರೋ ವಿಜ್ಞಾನಿಗಳು ಡಿ.5ರಂದು ಭಾರತದ ಅತ್ಯಂತ ಭಾರವಾದ ಉಪಗ್ರಹ ಜಿಸ್ಯಾಟ್‌ 11 ಉಡಾವಣೆಗೆ ಅಣಿಯಾಗುತ್ತಿದ್ದಾರೆ. ಮುಂದಿನ ವರ್ಷ ಚಂದ್ರಯಾನ-2 ಸೇರಿದಂತೆ ಹಲವಾರು ಯೋಜನೆಗಳು ಇಸ್ರೋ ಬಳಿ ಇವೆ.

ಸ್ವದೇಶಿ ಯಾನ:

ಮಾನವಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ’ಕ್ಕೆ ತಯಾರಿಯಲ್ಲಿ ತೊಡಗಿರುವ ಇಸ್ರೋ, ಆ ಯಾತ್ರೆಯನ್ನು ಹೆಚ್ಚು ಹೆಚ್ಚು ಸ್ವದೇಶಿಯಾಗಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ದೇಶದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ತಿಳಿಸಿದ್ದಾರೆ. 2020ಕ್ಕೆ ಗಗನಯಾನ ಯೋಜನೆ ಹಮ್ಮಿಕೊಳ್ಳುವ ಗುರಿಯನ್ನು ಇಸ್ರೋ ಹೊಂದಿದೆ. 

click me!