ಇಸ್ರೋದಿಂದ ಮೂರು ಗ್ಯಾಲಕ್ಸಿ ಪತ್ತೆ
ಆಸ್ಟ್ರೋಸ್ಯಾಟ್ ಬಾಹ್ಯಾಕಾಶ ವಿಕ್ಷಣಾ ಉಪಗ್ರಹ
800 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ
ಚೆನ್ನೈ(ಜು.3): ಆಸ್ಟ್ರೋಸ್ಯಾಟ್ - ಇಸ್ರೋ ನಿರ್ಮಿತ ಬಾಹ್ಯಾಕಾಶ ವಿಕ್ಷಣಾ ಉಪಗ್ರಹವು ಭೂಮಿಯಿಂದ 800 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ಪುಂಜಗಳ (ಗ್ಯಾಲಕ್ಸಿ)ನ್ನು ಪತ್ತೆ ಮಾಡಿದೆ.
ಈ ನೂತನ ನಕ್ಷತ್ರ ಪುಂಜಗಳಿಗೆ ಅಬೆಲ್ 2256 ಎಂದು ನಾಮಕರಣ ಮಾಡಲಾಗಿದ್ದು ಮೂರೂ ಗ್ಯಾಲೆಕ್ಸಿಗಳು ಸಮೀಪದಲ್ಲಿ ಒಂದಕ್ಕೊಂದು ಹೊಂದಿಕೊಳ್ಳುವಂತೆ ಕಂಡುಬಂದಿದೆ. ಹೀಗೆ ಇರುವ ಮೂರೂ ಗ್ಯಾಲೆಕ್ಸಿಗಳು ಭವಿಷ್ಯದಲ್ಲಿ ಒಂದಾಗಿ ಬೃಹತ್ ಗಾತ್ರದ ಒಂದೇ ನಕ್ಷತ್ರ ಪುಂಜವಾಗುವ ಸಾಧ್ಯತೆ ಇದೆ ಎಂದು ಇಸ್ರೋ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾಲೆಕ್ಸಿಗಳ ನೇರಳಾತೀತ ಚಿತ್ರಗಳನ್ನು ಬಿಡುಗಡೆಗೊಳಿಸಿರುವ ಇಸ್ರೋ, ಸದ್ಯ ಈ ನೂತನ ಗ್ಯಾಲೆಕ್ಸಿಗಳ ವಿಶೇಷ ಅಧ್ಯಯನದಲ್ಲಿ ತೊಡಗಿದೆ. ಅಲ್ಟ್ರಾ ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಮುಖೇನ ನಕ್ಷತ್ರ ಪುಂಜದ ಕುರಿತು ಅದ್ಯಯನ ನಡೆಸುತ್ತಿದ್ದಾರೆ.
ಈ ಮೂರೂ ನಕ್ಷತ್ರಪುಂಜಗಳು ಒಂದು ಭಾಗ ಮಾತ್ರವೇ ಕೂಡಿಕೊಂಡಿರುವಂತೆ ಕಂಡು ಬಂದಿದೆ. ಅಲ್ಲದೆ ಈ ಮೂರು ನಕ್ಷತ್ರ ಪುಂಜಗಳು ತಮ್ಮಲ್ಲಿ ಅನೇಕ ಚಿಕ್ಕ ಚಿಕ್ಕ ನಕ್ಷತ್ರ ಪುಂಜಗಳನ್ನು ಹೊಂದಿದೆ ಎನ್ನುವುದು ಸಹ ತಿಳಿದು ಬಂದಿದ್ದು ಈ ಕುರಿತಂತೆ ವಿಜ್ಞಾನಿಗಳು ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.