
ನವದೆಹಲಿ(ಡಿ. 31): ಹೊಸ ವರ್ಷದ ಸವಿ ಅನುಭವಿಸಲು ಭಾರತಕ್ಕೆ ಪ್ರವಾಸಕ್ಕೆ ಬಂದಿರುವ ಇಸ್ರೇಲ್ ನಾಗರಿಕರಿಗೆ ಅಲ್ಲಿನ ಸರಕಾರ ಎಚ್ಚರಿಕೆಯೊಂದನ್ನು ನೀಡಿದೆ. ಭಾರತದಲ್ಲಿ ಎಲ್ಲಿಯೂ ದೊಡ್ಡ ಗುಂಪಿರುವ ಅಥವಾ ಜನಸಂದಣಿ ಇರುವ ಸ್ಥಳಕ್ಕೆ ಹೋಗಬೇಡಿ ಎಂದು ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಭಾರತದಲ್ಲಿ ಪ್ರವಾಸಿಗರು ಹೆಚ್ಚಿರುವ ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಸ್ರೇಲ್'ನ ಪ್ರಬಲ ಗುಪ್ತಚರ ಸಂಸ್ಥೆಗಳು ಸರಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ವಹಿಸಲಾಗುತ್ತಿದೆ. ಇಸ್ರೇಲ್ ಗುಪ್ತಚರರ ಪ್ರಕಾರ ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ದಾಳಿ ನಡೆಯುವ ಸಂಭವವಿದೆ ಎನ್ನಲಾಗಿದೆ. ಹೀಗಾಗಿ, ಹೊಸ ವರ್ಷದ ಸಂಭ್ರಮಾಚರಣೆಗೆ ವಿದೇಶಿಗರು ಹೆಚ್ಚಾಗಿ ಆಗಮಿಸುವ ಗೋವಾದಲ್ಲಿ ದಾಳಿ ನಡೆಯುವ ಬಗ್ಗೆ ಪರೋಕ್ಷವಾಗಿ ಮಾಹಿತಿ ಬಂದಂತಾಗಿದೆ.
ದಾಳಿ ಅಪಾಯ ತಳ್ಳಿಹಾಕಿದ ಗೋವಾ ಸರಕಾರ:
ಉಗ್ರರ ದಾಳಿ ನಡೆಯುವ ಸಂಭವವಿದೆ ಎಂದು ಇಸ್ರೇಲ್ ನೀಡಿರುವ ಎಚ್ಚರಿಕೆಯನ್ನು ಗೋವಾ ಸರಕಾರ ತಳ್ಳಿಹಾಕಿದೆ. ಹೊಸ ವರ್ಷದ ಸಂದರ್ಭದಲ್ಲಿ ವಿದೇಶಗಳು ತಮ್ಮ ನಾಗರಿಕರಿಗೆ ಇಂಥ ಎಚ್ಚರಿಕೆ ಮತ್ತು ಸೂಚನೆಗಳನ್ನು ನೀಡುವುದು ಸಾಮಾನ್ಯದ ವಿಷಯ. ಗೋವಾದಲ್ಲಿ ಯಾವುದೇ ಅಪಾಯ ಸಂಭವಿಸುವುದಿಲ್ಲ. ಜನರು ಕಂಗಾಲಾಗುವ ಅಗತ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಕೆಲ ತಿಂಗಳಿನಿಂದ ಉಗ್ರಗಾಮಿಗಳು ಭಾರತದ ಗಡಿಭಾಗದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಲೇ ಬಂದಿದ್ದಾರೆ. ಪಾಕಿಸ್ತಾನದಿಂದ ಅನೇಕ ಉಗ್ರತಂಡಗಳು ಭಾರತದ ಒಳನುಸುಳಿ ವಿವಿಧ ಕಡೆ ದಾಳಿ ಎಸಗಲು ಸಂಚು ರೂಪಿಸುತ್ತಿರುವ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳು ಬಾರಿ ಬಾರಿ ಎಚ್ಚರಿಸುತ್ತಲೇ ಇವೆ. ವಿಶ್ವದ ಅತ್ಯಂತ ಪ್ರಬಲ ಗುಪ್ತಚರ ಜಾಲ ಹೊಂದಿರುವ ಇಸ್ರೇಲ್ ದೇಶದಿಂದ ಈಗ ಇಂಥದ್ದೊಂದು ಎಚ್ಚರಿಕೆ ಬಂದಿರುವುದು ಬಹಳ ಗಂಭೀರವಾದ ವಿಷಯ. ಈ ಬಗ್ಗೆ ಭಾರತದ ರಕ್ಷಣಾ ಸಚಿವಾಲಯ ಯಾವುದೇ ಸ್ಪಷ್ಟನೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.