
ಮಾಸ್ಕೋ(ಜೂನ್ 16): ಅಮೆರಿಕ ಕೈಯಿಂದ ಒಸಾಮ ಬಿನ್ ಲಾಡೆನ್ ಹತ್ಯೆಯಾದ ಬಳಿಕ ಮತ್ತೊಬ್ಬ ಬಹುದೊಡ್ಡ ಉಗ್ರ ಮುಖಂಡನ ಹತ್ಯೆಯಾಗಿದೆ ಎಂಬಂತಹ ಸುದ್ದಿ ಕೇಳಿಬಂದಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಮುಖ್ಯಸ್ಥ ಹಾಗೂ ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಬು ಬಕರ್ ಅಲ್-ಬಗ್ದಾದಿ ಹತ್ಯೆಯಾಗಿರಬಹುದೆಂದು ರಷ್ಯಾ ದೇಶ ಶಂಕಿಸಿದೆ. ಸಿರಿಯಾ ದೇಶದ ಉತ್ತರ ಭಾಗದಲ್ಲಿರುವ ರಾಖ್ಖಾ ನಗರದಲ್ಲಿ ಮೇ 28ರಂದು ತಾನು ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ಬಾಗ್ದಾದಿ ಸೇರಿದಂತೆ 300ಕ್ಕೂ ಹೆಚ್ಚು ಜನರು ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ರಷ್ಯಾದ ಮಿಲಿಟರಿ ಹೇಳಿದೆ. ಆದರೆ, ಸಿರಿಯಾ ಸರಕಾರ ಈ ಬಗ್ಗೆ ಏನೂ ಮಾಹಿತಿ ನೀಡಿಲ್ಲ. ಸಿರಿಯಾದಲ್ಲಿ ಐಸಿಸ್ ವಿರುದ್ಧ ಹೋರಾಟ ನಡೆಸುತ್ತಿರುವ ಅಮೆರಿಕದಿಂದಲೂ ಈ ಕುರಿತು ಸ್ಪಷ್ಟನೆ ಬಂದಿಲ್ಲ. ರಷ್ಯಾದ ರಕ್ಷಣಾ ಸಚಿವಾಲಯವು ಮಾಹಿತಿ ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದೆ.
ಮೇ 28ರಂದು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಮಿಲಿಟರಿ ಕೌನ್ಸಿಲ್'ನ ಸಭೆಯು ರಾಖ್ಖಾ ನಗರದಲ್ಲಿ ನಡೆಯುತ್ತಿತ್ತು. ಅದರಲ್ಲಿ 30 ಕಮಾಂಡರ್'ಗಳು ಹಾಗೂ ಸುಮಾರು 300ರಷ್ಟು ಐಸಿಸ್ ಯೋಧರು ಪಾಲ್ಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಲ್-ಬಾಗ್ದಾದಿ ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದನು ಎಂದು ರಷ್ಯಾದ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿಯು ಮಾಹಿತಿ ಕಲೆಹಾಕಿದೆ. ಸಭೆ ನಡೆಯುತ್ತಿದ್ದ ಸ್ಥಳವನ್ನು ಟಾರ್ಗೆಟ್ ಮಾಡಿ ರಷ್ಯಾದ ಯುದ್ಧ ವಿಮಾನಗಳು ದಾಳಿ ಮಾಡಿದ್ದವು. ಆ ದಾಳಿಯಲ್ಲಿ ಅಲ್-ಬಾಗ್ದಾದಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಸಾವನ್ನಪ್ಪಿರುವ ಶಂಕೆ ಇದೆ.
ಅಲ್-ಬಾಗ್ದಾದಿ ಹತ್ಯೆಯಾದನೆಂದು ಈ ಹಿಂದೆಯೂ ಅನೇಕ ವರದಿಗಳು ಬಂದಿದ್ದವು. ಆದರೆ, ಅವೆಲ್ಲಾ ಸುಳ್ಳೆಂದು ಸಾಬೀತಾಗಿವೆ. ಆದರೆ, ಈಗ ರಷ್ಯಾ ದೇಶದ ಅನುಮಾನ ನಿಜವಾಗುತ್ತಾ ಎಂದು ಕಾದುನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.