
ನವದೆಹಲಿ(ಅ.10): ಬ್ರಹ್ಮೋಸ್ ಕ್ಷಿಪಣಿಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಾಗೂ ಇತರ ಕೆಲವು ದೇಶಗಳಿಗೆ ಸೋರಿಕೆ ಮಾಡುತ್ತಿದ್ದ ಎನ್ನಲಾದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಬಂಧಿಸಲಾಗಿದೆ.
ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್), ಸೇನಾ ಗುಪ್ತಚರ ವಿಭಾಗದ ಜತೆ ಜಂಟಿ ಕಾರ್ಯಾಚರಣೆ ನಡೆಸಿ, ನಿಶಾಂತ್ ಅಗರ್‌ವಾಲ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತ ನಾಗಪುರದಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಸಂಶೋಧನಾ ಕೇಂದ್ರದ (ಬಿಎಂಆರ್‌ಸಿ) ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ಸೀನಿಯರ್ ಸಿಸ್ಟಂ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ಈ ಮಧ್ಯೆ ಭಾರತದ ರಕ್ಷಣಾ ಇಲಾಖೆಯಲ್ಲಿರುವ ಯುವ ವಿಜ್ಞಾನಿಗಳನ್ನು ಸೆಳೆಯಲು ಪಾಕಿಸ್ತಾನದ ಐಎಸ್‌ಐ, ಮಾಡೆಲ್‌ಗಳು ಮತ್ತು ಸೆಕ್ಸ್ ವಿಡಿಯೋಗಳನ್ನು ಬಳಸಿ ಹನಿ ಟ್ರ್ಯಾಪ್ ಮಾಡುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಗೌಪ್ಯ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಭಾರತದ ಯುವ ವಿಜ್ಞಾನಿಗಳನ್ನು ಸೆಳೆಯುವಲ್ಲಿ ಐಎಸ್‌ಐ ನಿರತವಾಗಿದೆ ಎಂದು ತಿಳಿಸಿದೆ.
ಮಾಡೆಲ್‌ಗಳು, ಸೆಕ್ಸ್ ವಿಡಿಯೋಗಳ ಮೂಲಕ ಯುವ ವಿಜ್ಞಾನಿಗಳನ್ನು ಹನಿಟ್ರ್ಯಾಪ್ ಮಾಡುತ್ತಿರುವ ಐಎಸ್‌ಐ, ಈ ಮೂಲಕ ಭಾರತದ ರಹಸ್ಯ ಮಾಹಿತಿಗಳನ್ನು ಪಡೆಯುವ ಹುನ್ನಾರ ನಡೆಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಪ್ರಮುಖವಾಗಿ ಸೇನೆ ಮತ್ತು ರಕ್ಷಣಾ ಇಲಾಖೆಯ ಯುವ ವಿಜ್ಞಾನಿಗಳೇ ಐಎಸ್‌ಐ ಟಾರ್ಗೆಟ್ ಎಂದು ವರದಿ ಎಚ್ಚರಿಸಿದೆ.
ಬಂಧಿತ ನಿಶಾಂತ್ ಅಗರ್‌ವಾಲ್ ನಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ ಟಾಪ್ ನಲ್ಲಿ ಹಲವು ಆಕ್ಷೇಪಾರ್ಹ ಸಂಗತಿಗಳಿದ್ದು, ಪಾಕಿಸ್ತಾನದೊಂದಿಗೆ ನಡೆಸಿದ ಸಂಭಾಷಣೆಯ ವಿವರಗಳೂ ಇವೆ ಎನ್ನಲಾಗಿದೆ. ಅಲ್ಲದೇ ಬ್ರಹ್ಮೋಸ್ ಕ್ಷಿಪಣಿಯ ರಹಸ್ಯ ಮಾಹಿತಿಗಳೂ ಇದರಲ್ಲಿ ಇದ್ದು, ಈ ಎಲ್ಲಾ ಮಾಹಿತಿಗಳು ನಿಶಾಂತ್ ನ ವೈಯಕ್ತಿಕ ಲ್ಯಾಪ್ ಟಾಪ್ ಗೆ ಹೇಗೆ ಬಂದವು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.