
ಬೆಂಗಳೂರು(ಜುಲೈ 25): ಬಿಪಿಎಲ್ ಕಾರ್ಡ್'ಗಳ ಹಂಚಿಕೆ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಅದು.. ವರ್ಷಕ್ಕೆ ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದ ಪ್ರಕರಣವನ್ನು ಖುದ್ದು ಆಸಕ್ತಿ ವಹಿಸಿ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ತನಿಖೆ ನಡೆಸಿದ್ದರು. ಅಕ್ರಮ ಗಣಿಗಾರಿಕೆಯ ತನಿಖಾ ವರದಿ ಸಲ್ಲಿಸುವ ಹಿಂದಿನ ದಿನವೇ ಆಹಾರ ಇಲಾಖೆಯ ಬ್ರಹ್ಮಾಂಡ ಹಗರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರ ಈ ವರದಿಯನ್ನು ಕಸದ ಬುಟ್ಟಿಗೆ ಎಸೆದಿದೆ.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಹಗರಣವಿದು:
ಈ ಹಗರಣ ನಡೆದಿದ್ದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಆಗ ಎಚ್.ಡಿ.ಕುಮಾರಸ್ವಾಮಿ ಅವ್ರು ಈ ರಾಜ್ಯದ ಮುಖ್ಯಮಂತ್ರಿ. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾದಾಗ ಯಡಿಯೂರಪ್ಪ ಮುಖ್ಯಮಂತ್ರಿ. ಇವ್ರ ನಂತರ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮತ್ತು ಈಗ ಸಿದ್ದರಾಮಯ್ಯ ಅವ್ರ ಸರ್ಕಾರದ ಅವಧಿಯಲ್ಲೂ ತನಿಖಾ ವರದಿ ಕುರಿತು ಒಂದೇ ಕ್ರಮ ಕೈಗೊಂಡಿಲ್ಲ. ಇನ್ನು, 2013ರಲ್ಲಿ ಲೋಕಾಯುಕ್ತರಾಗಿ ಅಧಿಕಾರಕ್ಕೆ ಬಂದಿದ್ದ ನ್ಯಾ| ಭಾಸ್ಕರರಾವ್ ತಮ್ಮ ಅವಧಿಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಿ ರಾಜ್ಯಪಾಲರಿಗೆ ತನಿಖಾ ವರದಿ ರವಾನಿಸಿ ಕೈ ತೊಳೆದುಕೊಂಡಿದ್ದರು. ಆದ್ರೆ ರಾಜ್ಯಪಾಲ ವಜುಭಾಯ್ ವಾಲಾ ಕೂಡ ಈ ವರದಿ ಕಣ್ಣೆತ್ತಿಯೂ ನೋಡಿಲ್ಲ.
ಆಹಾರ ‘ಲೂಟಿ’ಯ ಸುತ್ತ ..!
* BPL ಕಾರ್ಡ್ಗಳ ಹಂಚಿಕೆ, ಪಡಿತರದಾರರ ಆಯ್ಕೆ ಪ್ರಕ್ರಿಯೆ
* 2006ರಲ್ಲಿ ಕೊಮ್ಯಾಟ್ ಟೆಕ್ನಾಲಜೀಸ್ ಜತೆ 5 ವರ್ಷಗಳ ಒಪ್ಪಂದ
* ಬೋಗಸ್ ಕಾರ್ಡ್ಗಳ ಲೆಕ್ಕಾಚಾರದ ಮೇಲೆ ಕಾರ್ಡ್ ಹಂಚಿಕೆ
* ಕಾಳಸಂತೆಕೋರರಾ ಪಾಲಾಗಿತ್ತು ಬಡವರಿಗೆ ಸೇರಬೇಕಿದ್ದ ಪಡಿತರ
* ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 144 ಕೋಟಿ ರೂಪಾಯಿ ನಷ್ಟ
* ವಾರ್ಷಿಕ 1,738 ಕೋಟಿ, 4 ವರ್ಷಗಳಲ್ಲಿ 6 ಸಾವಿರ ಕೋಟಿ ನಷ್ಟ
ಈ ಹಗರಣದ ಸುತ್ತ ಒಮ್ಮೆ ನೋಡೋದಾದ್ರೆ. ಇದು ಬಿಪಿಎಲ್ ಕಾರ್ಡ್'ಗಳ ಹಂಚಿಕೆ ಹಾಗೂ ಪಡಿತರ ಆಯ್ಕೆ ಪ್ರಕ್ರಿಯೆಯಲ್ಲಾದ ಹಗರಣ. 2006ರಲ್ಲಿ ಕೊಮ್ಯಾಟ್ ಟೆಕ್ನಾಲಜೀಸ್ ಜತೆ 5 ವರ್ಷಗಳ ಅವಧಿಗೆ ಒಪ್ಪಂದ ಆಗಿರುತ್ತೆ. ಆದ್ರೆ ಇಲ್ಲಿ ಬೋಗಸ್ ಕಾರ್ಡ್'ಗಳ ಲೆಕ್ಕಾಚಾರದ ಮೇಲೆ ಕಾರ್ಡ್ ಹಂಚಿಕೆಯಾಗಿ ಪಡಿತರ ಕಾಳಸಂತೆಕೋರರ ಪಾಲಾಗುತ್ತೆ. ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 144 ಕೋಟಿ ರೂಪಾಯಿ ನಷ್ಟ ಆಗಲಿದೆ. ವಾರ್ಷಿಕ 1,738 ಕೋಟಿ ರೂಪಾಯಿ ಅಂದ್ರೆ 4 ವರ್ಷಗಳಲ್ಲಿ 6 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಅನ್ನೋದನ್ನು ಸಂತೋಷ್ ಹೆಗ್ಡೆಯವರ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅವಧಿಯಲ್ಲಿ ಬಂದು ಹೋಗಿದ್ದ ನಾಲ್ವರು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿಲ್ಲ.. ಇತ್ತ ಅಂದು ವರದಿ ಪಡೆದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಂದು ತಾವು ಸಿಎಂ ಆಗ್ತಿದ್ದಹಾಗೇ ಆ ವರದಿಯನ್ನು ಮರೆತೇ ಬಿಟ್ಟಿದ್ದಾರೆ.. ಹಾಗಿದ್ರೆ, ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿ ಹಗರಣದ ಕೇಸ್'ಗೆ ಜನನಾಯಕರು ಎಳ್ಳು ನೀರು ಬಿಟ್ಟರಾ.. ಅನ್ನೋ ಅನುಮಾನ ಕಾಡುತ್ತಿದ್ದು.. ಸಿಎಂ ಸಾಹೇಬ್ರೇ ಉತ್ತರಿಸಬೇಕಿದೆ.
ಇದೇ ವೇಳೆ, ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ರಾಜ್ಯದ ಮೂರು ಪ್ರಮುಖ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಭ್ರಷ್ಟ ಕಾಂಗ್ರೆಸ್, ಭ್ರಷ್ಟ ಮತ್ತು ಕೋಮುವಾದಿ ಬಿಜೆಪಿ ಮತ್ತು ಅಪ್ಪ-ಮಕ್ಕಳ ಜೆಡಿಎಸ್ ಪಕ್ಷಗಳಿಂದ ಏನೂ ಉಪಯೋಗವಿಲ್ಲ ಎಂದು ಹೇಳಿದ ಹಿರೇಮಠ್, ಪರ್ಯಾಯ ರಾಜಕೀಯ ಪಕ್ಷದ ಅಗತ್ಯವಿರುವುದನ್ನು ಪರೋಕ್ಷವಾಗಿ ತಿಳಿಸಿದರು.
- ಜಿ. ಮಹಾಂತೇಶ್, ಸುವರ್ಣನ್ಯೂಸ್, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.