
ಬೆಂಗಳೂರು (ಫೆ.17): ಪ್ರಯಾಣಿಕರ ವಾಹನಗಳ ಮೇಲೆ ಹೇರಿರುವ ಅಂತಾರಾಜ್ಯ ತೆರಿಗೆಯನ್ನು ರದ್ದುಪಡಿಸಿ ನೆರೆಯ ಐದು ರಾಜ್ಯಗಳ ಜತೆ ಒಪ್ಪಂದ ಮಾಡಿಕೊಳ್ಳದಿದ್ದರೆ ಒಂದು ತಿಂಗಳ ನಂತರ ಮುಷ್ಕರ ನಡೆಸುವುದಾಗಿ ಕರ್ನಾಟಕ ಲಾರಿ ಮಾಲಿಕರ ಫೆಡರೇಶನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೆರೆಯ ತಮಿಳುನಾಡು, ಆಂಧ್ರ, ಕೇರಳ, ಪಾಂಡಿಚೇರಿ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪರಸ್ಪರ ಆಯಾ ರಾಜ್ಯಗಳ ಪ್ರಯಾಣಿಕರ ಬಸ್, ಕಾರ್, ಕ್ಯಾಬ್ ಮತ್ತಿತರ ಪ್ರಯಾಣಿಕರ ವಾಹನಗಳು ಪ್ರವೇಶಿಸಿದರೆ ಯಾವುದೇ ಹೊರ ರಾಜ್ಯದ ತೆರಿಗೆ ಹೇರದಂತೆ ಐದು ರಾಜ್ಯಗಳ ನಡುವೆ ಒಪ್ಪಂದವಾಗಿದೆ. ಆದರೆ ಕರ್ನಾಟಕದ ವಾಹನಗಳಿಗೆ ಮಾತ್ರ ನೆರೆಯ ರಾಜ್ಯಗಳಲ್ಲಿ ಭಾರಿ ಪ್ರಮಾಣದ ತೆರಿಗೆ ವಿಧಿಸಲಾಗುತ್ತಿದೆ. ಹೊರ ರಾಜ್ಯದ ವಾಹನಗಳಿಗೂ ಕರ್ನಾಟಕದಲ್ಲಿ ತೆರಿ
ಗೆ ವಿಧಿಸಲಾಗುತ್ತಿದೆ. ಹೀಗಾಗಿ ನೆರೆಯ ರಾಜ್ಯಗಳ ಜತೆ ಶೀಘ್ರ ಒಪ್ಪಂದ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಲಾಗಿದೆ. ಪ್ರಸಕ್ತ ಬಜೆಟ್ ಮಂಡನೆ ವೇಳೆ ಈ ಬಗೆಗೆ ಘೋಷಣೆಯಾಗದಿದ್ದರೆ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಒಂದು ಬಸ್ ಖರೀದಿ ಮೇಲೆ 7.25 ಲಕ್ಷ ರು. ತೆರಿಗೆ ವಿಧಿಸಲಾಗುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ 3 ಲಕ್ಷ ರು., ತಮಿಳುನಾಡಿನಲ್ಲಿ ಕೇವಲ ೪ ಲಕ್ಷ ರು. ತೆರಿಗೆ ಇದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹೊಸ ಬಸ್ ಖರೀದಿಸದಂತಹ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ನೈಸ್ ರಸ್ತೆಯಲ್ಲಿ ಪ್ರತಿದಿನ ಎಲ್ಲ ವಾಹನಗಳಿಂದ 1.10 ಕೋಟಿ ರು. ಟೋಲ್ ವಸೂಲಿ ಮಾಡಲಾಗುತ್ತಿದೆ. ಹುಬ್ಬಳ್ಳಿಯ ಗಬ್ಬೂರ್ ಟೋಲ್‌ನಲ್ಲಿ 60 ಲಕ್ಷ ರು. ಟೋಲ್ ವಸೂಲಿ ಮಾಡಲಾಗುತ್ತಿದೆ. ಇದರಿಂದ ಖಾಸಗಿ ವಾಹನಗಳ ಮಾಲೀಕರು ತತ್ತರಿಸಿ ಹೋಗಿದ್ದಾರೆ. ಈ ವಿಚಾರಗಳಿಗೆ ಬಜೆಟ್‌ನಲ್ಲಿ ಸ್ಪಂದಿಸುವಂತೆ ಕೋರಲಾಗಿದೆ ಎಂದರು.
ಕಳೆದ ವರ್ಷದ ಬಜೆಟ್‌ನಲ್ಲಿ ಖಾಸಗಿ ಬಸ್‌ಗಳ ಮೇಲೆ ವಿಧಿಸಿರುವ ಶೇ.50 ರಷ್ಟು ರಸ್ತೆ ತೆರಿಗೆಯನ್ನು ರದ್ದುಪಡಿಸಬೇಕು. ಲಾರಿಗಳ ಮೇಲೂ ವಿಪರೀತ ತೆರಿಗೆ ಹೇರಲಾಗಿದೆ. 12 ಚಕ್ರ ವಾಹನಗಳ ಮೇಲೆ 31,080 ರು. ತೆರಿಗೆ ವಿಧಿಸಲಾಗಿದೆ. 10 ಚಕ್ರ ವಾಹನಗಳ ಮೇಳೆ 17,412 ರು. ತೆರಿಗೆ ಇದೆ. ಇದು ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಹೆಚ್ಚಾಗಿದೆ ಎಂದು ದೂರಿದರು.
ಎಂಎಸ್‌ಐಎಲ್ ಮದ್ಯದಂಗಡಿ ಬೇಡ
ರಾಜ್ಯದಲ್ಲಿ ಈಗಾಗಲೇ 380 ಕ್ಕೂ ಹೆಚ್ಚು ಎಂಎಸ್‌ಐಎಲ್ ಚಿಲ್ಲರೆ ಮದ್ಯ ಮಾರಾಟದ ಅಂಗಡಿಗಳನ್ನು ತೆರೆಯಲಾಗಿದ್ದು, ಇನ್ನು ಮುಂದೆ ಹೊಸದಾಗಿ ಪರವಾನಗಿ ನೀಡಬಾರದು ಎಂದು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಂಡಿದ್ದ ಫೆಡರೇಶನ್ ಪದಾಧಿಕಾರಿಗಳು ಲಿಖಿತ ಮನವಿ ಸಲ್ಲಿಸಿದ್ದಾರೆ. ೨೦೧೪-೧೫ರ ಬಜೆಟ್‌ನಲ್ಲಿ ವಿಧಿಸಿರುವ ಶೇ.೫.೫ರಷ್ಟು ವ್ಯಾಟ್ ವಾಪಸ್ ಪಡೆಯಬೇಕು. ಹೊಸ ಮದ್ಯದಂಗಡಿ ತೆರೆಯಲು ಗ್ರಾಮ ಪಂಚಾಯತಗಳಿಂದ ನಿರಕ್ಷೇಪಣಾ ಪತ್ರ ಪಡೆಯುವಂತೆ ಜಾರಿಗೊಳಿಸಿರುವ ಪಂಚಾಯತ್ ರಾಜ್ ಎರಡನೇ ತಿದ್ದುಪಡಿ ವಾಪಸ್ ಪಡೆಯಬೇಕು, ಸನ್ನದು ಶುಲ್ಕ ಹೆಚ್ಚಳ ಮಾಡಬಾರದು, ವೈನ್‌ಶಾಪ್‌ಗಳಲ್ಲಿ ಸ್ಥಳದಲ್ಲೇ ಮದ್ಯ ಸೇವನೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಲಾಗಿದೆ.
ಗಾಂಧೀ ಜಯಂತಿ ಮತ್ತು ಚುನಾವಣಾ ಸಂದರ್ಭದಲ್ಲಿ ಕನಿಷ್ಠ ಅವಧಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಕಾನೂನು ತಿದ್ದುಪಡಿ ತರಬೇಕು, ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಆಹಾರದ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಇತರ ಮಾಂಸಾಹಾರಿ ಹೋಟೆಲ್‌ಗಳಳ್ಲಿ ವಿಧಿಸುವ ದರಕ್ಕೆ ಅನ್ವಯಗೊಳಿಸಬೇಕು. ಹೆದ್ದಾರಿ ಪಕ್ಕದ ಡಾಬಾಗಳಲ್ಲಿ ಮದ್ಯ ಮಾರಾಟ ಮತ್ತು ಸೇವನೆ ತೀವ್ರವಾಗಿ ನಿಗ್ರಹಿಸಬೇಕು ಹಾಗೂ ಗೋವಾ ಗಡಿಯ ರಾಜ್ಯದ ಜಿಲ್ಲೆಗಳಲ್ಲಿ ಹೊರರಾಜ್ಯದ ಮದ್ಯ ಸರಬರಾಜು ಆಗದಂತೆ ಬಿಗಿ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.