ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಸಿಎ ನಿವೇಶನ ರದ್ದು

By Suvarna Web DeskFirst Published Feb 17, 2017, 2:54 PM IST
Highlights

ಬಿಡಿಎ, ಸಿಟಿಜನ್‌ ಎಜುಕೇಷನ್‌ ಸೊಸೈಟಿಗೆ 1977ರಿಂದ 2007ರ ಅವಧಿಗೆ 52,650 ಚದರಡಿ  ಜಾಗ ಗುತ್ತಿಗೆ ನೀಡಿತ್ತು. ಈ ಸೊಸೈಟಿಯು ಮಂಜೂರಾದ ಜಾಗಕ್ಕಿಂತಲೂ 3627.81 ಚದರಡಿ ಹೆಚ್ಚು ಒತ್ತುವರಿ ಮಾಡಿಕೊಂಡಿತ್ತು.  ಅದರಲ್ಲಿ 1060.49 ಚದರಡಿ ಬಿಡಿಎ ಮತ್ತು ಇದಕ್ಕೆ ಹೊಂದಿಕೊಂಡಿದ್ದ ‘ವಾಣಿ ಎಜುಕೇಷನ್‌ ಸೊಸೈಟಿ’ಯ  2561.31 ಚದರಡಿ ಜಾಗವೂ ಇದೆ.

ಬೆಂಗಳೂರು(ಫೆ.17): ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಸಿ.ಎ. ನಿವೇಶನಗಳ ಒತ್ತುವರಿ ಮತ್ತು ಗುತ್ತಿಗೆ ಮೌಲ್ಯ, ದಂಡದ ಬಾಕಿ ಮೊತ್ತವನ್ನು ಪಾವತಿಸಿಕೊಳ್ಳದೆಯೇ ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಏಕಾಏಕೀ ರದ್ದುಗೊಳಿಸಿದೆ. ಅಧಿಕಾರಿಗಳ ಈ ನಿರ್ಧಾರದಿಂದ ಬಿಡಿಎಗೆ ಒಟ್ಟು 15 ಕೋಟಿ ರೂ. ರೂಪಾಯಿನಷ್ಟು ನಷ್ಟವಾಗಿರುವುದು ಬೆಳಕಿಗೆ ಬಂದಿದೆ.

ಇದೇ ಪ್ರಕರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಹಾಲಿ ಅಧ್ಯಕ್ಷ ಹಾಗೂ ವಿವಾದಿತ ಐಎಎಸ್​ ಅಧಿಕಾರಿ ಟಿ.ಶ್ಯಾಮ್​ ಭಟ್​ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಪಿ.ಸಿ. ಕಾಯ್ದೆ ಅಡಿಯಲ್ಲಿ ಪೂರ್ವಾನುಮತಿ ಕೋರಿ  ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಈ ಬಗ್ಗೆ ಸುವರ್ಣನ್ಯೂಸ್​ ಜನವರಿ 20 ರಂದು ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಒಂದು ತಿಂಗಳ ಅವಧಿಯಲ್ಲಿ ಸಿ.ಎ.ನಿವೇಶನಗಳನ್ನು ರದ್ದುಗೊಳಿಸಿದೆ.

ಬಿಡಿಎ, ಸಿಟಿಜನ್‌ ಎಜುಕೇಷನ್‌ ಸೊಸೈಟಿಗೆ 1977ರಿಂದ 2007ರ ಅವಧಿಗೆ 52,650 ಚದರಡಿ  ಜಾಗ ಗುತ್ತಿಗೆ ನೀಡಿತ್ತು. ಈ ಸೊಸೈಟಿಯು ಮಂಜೂರಾದ ಜಾಗಕ್ಕಿಂತಲೂ 3627.81 ಚದರಡಿ ಹೆಚ್ಚು ಒತ್ತುವರಿ ಮಾಡಿಕೊಂಡಿತ್ತು.  ಅದರಲ್ಲಿ 1060.49 ಚದರಡಿ ಬಿಡಿಎ ಮತ್ತು ಇದಕ್ಕೆ ಹೊಂದಿಕೊಂಡಿದ್ದ ‘ವಾಣಿ ಎಜುಕೇಷನ್‌ ಸೊಸೈಟಿ’ಯ  2561.31 ಚದರಡಿ ಜಾಗವೂ ಇದೆ.

ಸಿಟಿಜನ್‌ ಸೊಸೈಟಿ ಗುತ್ತಿಗೆ 2007ರಲ್ಲಿ ನವೀಕರಣ ಆಗಬೇಕಿತ್ತು. ಒತ್ತುವರಿ ಆದ ಜಾಗಕ್ಕೆ ಬಿಡಿಎ 90 ಲಕ್ಷಕ್ಕೂ ಹೆಚ್ಚು ದಂಡ  ವಿಧಿಸಿ ಸೊಸೈಟಿಯಿಂದ ಕಟ್ಟಿಸಿಕೊಳ್ಳಲು ತೀರ್ಮಾನಿಸಿತ್ತು. ಅಲ್ಲದೆ, ಮೂಲ ಮಂಜೂರಾಗಿದ್ದ ನಿವೇಶನದ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ನವೀಕರಿಸಿಕೊಂಡಿರಲಿಲ್ಲ. ಒತ್ತುವರಿ ಆಗಿರುವ ಜಾಗಕ್ಕೆ 99,69,500 ರೂ.ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಿರಲಿಲ್ಲ. ಇನ್ನು, 90,69,500 ರೂ.ಗಳನ್ನು ದಂಡ ವಿಧಿಸಲು ಕೈಗೊಂಡಿದ್ದ ನಿರ್ಣಯವನ್ನು ಬಿಡಿಎ ಸಭೆಯಲ್ಲಿ ಕೈ ಬಿಟ್ಟಿದ್ದು ಅನುಮಾನಗಳಿಗೆ ಕಾರಣವಾಗಿತ್ತು.

ಮೂಲತಃ ಹಂಚಿಕೆಯಾಗಿದ್ದ ವಿಸ್ತೀರ್ಣಕ್ಕೆ ಹೆಚ್ಚಿನ ವಿಸ್ತೀರ್ಣವನ್ನೂ ಒಳಗೊಂಡಂತೆ ಗುತ್ತಿಗೆ ಕರಾರು ಪತ್ರವನ್ನು ನವೀಕರಿಸಲು ಆಯುಕ್ತರು ಆದೇಶಿಸಿದ್ದರು. 52,650 ಚ.ಅಡಿಗಳಿಗೆ ಲೆಕ್ಕಾಚಾರ ಮಾಡದೆಯೇ ಹೆಚ್ಚುವರಿ ವಿಸ್ತೀರ್ಣವಾದ 3,627.81 ಚ.ಅಡಿಗಳಿಗೆ ಮಾತ್ರ ಆರ್ಥಿಕ ವಿಭಾಗದ ಅಧಿಕಾರಿಗಳು ಲೆಕ್ಕಾಚಾರ ಮಾಡಿದ್ದರು. ಇದರಲ್ಲಿ 3,627.81 ಚ.ಅಡಿಗಳಿಗೆ ಗುತ್ತಿಗೆ ಮೌಲ್ಯ ಕೇವಲ 8,43,595 ರೂ.ಗಳನ್ನು ಮಾತ್ರ ಪಾವತಿ ಮಾಡಲಾಗಿತ್ತು. ಈ ಕ್ರಮವು ಸರಿ ಇರಲಿಲ್ಲ ಎಂದು ಬಿಡಿಎ ಅಧಿಕಾರಿಗಳು ಎಸಿಬಿಗೆ ಬರೆದಿರುವ ಉತ್ತರದಲ್ಲಿ ತಿಳಿಸಿದೆ.

ಮೂಲ ವಿಸ್ತೀರ್ಣ 52,650 ಚ.ಅಡಿಗಳ ಗುತ್ತಿಗೆ ಮೌಲ್ಯವನ್ನು ಲೆಕ್ಕಾಚಾರ ಮಾಡಿರಲಿಲ್ಲ. ಮೂಲ ವಿಸ್ತೀರ್ಣ ಮತ್ತು ಹೆಚ್ಚುವರಿಯಾಗಿ ಅತಿಕ್ರಮಿಸಿಕೊಂಡಿದ್ದ ಜಾಗದ ಒಟ್ಟು 56,277.80 ಜಾಗಕ್ಕೆ 14,58,83,960 ರೂ.ಗಳನ್ನು ಪಾವತಿಸಿಕೊಳ್ಳದಿರುವುದು ಬಿಡಿಎ ಬೊಕ್ಕಸಕ್ಕೆ ಆದ ನಷ್ಟ ಎಂದು ಹೇಳಲಾಗಿದೆ.

ಅದೇ ರೀತಿ ವಾಣಿ ಎಜುಕೇಷನ್​ ಸೆಂಟರ್​ ಕೂಡ ಗುತ್ತಿಗೆ ನವೀಕರಿಸಿರಲಿಲ್ಲ. ಇದರ ಮೊತ್ತ 1,55,25,099 ರೂ.ಎಂದು ತಿಳಿದು ಬಂದಿದೆ. ಇದನ್ನು 90 ದಿನದೊಳಗೆ ಪಾವತಿಸದ ಕಾರಣ, ಈಗ ಬಿಡಿಎ ಸಿ.ಎ.ನಿವೇಶನವನ್ನು ರದ್ದುಗೊಳಿಸಿದೆ.

ಇದೇ ಪ್ರಕರಣದಲ್ಲಿ ಶ್ಯಾಮ್​ ಭಟ್​ ಸೇರಿ ಇತರೆ ಅಧಿಕಾರಿ, ನೌಕರರ ವಿರುದ್ಧ ‘ಎಸಿಬಿ ಪ್ರಸ್ತಾಪಿಸಿರುವ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆಗೆ ಅನುಮತಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಕರ್ನಾಟಕ ನಾಗರಿಕ ಸೇವಾ ನಿಯಮ 1957ರ ಅನ್ವಯ ಕರ್ತವ್ಯ ಲೋಪದ ಮೇಲೆ ಶಿಸ್ತು ಕ್ರಮ ಜರುಗಿಸಬಹುದು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರು ಅನುಮೋದಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್

click me!