
ಬೆಂಗಳೂರು(ನ. 10): ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆ ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ ಒಬ್ಬ ನರಹಂತಕ, ಅತ್ಯಾಚಾರಿ, ಹಿಂದೂವಿರೋಧಿ, ಕನ್ನಡವಿರೋಧಿ ಎಂಬುದು ವಿರೋಧಿಗಳ ಆರೋಪ. ಆದರೆ, ಟಿಪ್ಪು ವೈಯಕ್ತಿಕವಾಗಿ ಏನೇ ಇರಲಿ ಆದರೆ, ಅವರ ಆಡಳಿತವು ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯುವಂಥದ್ದಾಗಿದೆ. ಜರ್ಮನಿಯಲ್ಲಿ ಹಿಟ್ಲರ್ ಎಷ್ಟೇ ಕ್ರೌರ್ಯ ಮೆರೆದರೂ ಅವರ ಬಂಕರ್'ಗಳು, ಕಾರಾಗೃಹ ಕೇಂದ್ರಗಳನ್ನು ಇಂದಿಗೂ ಸಂರಕ್ಷಿಸಿ ಇಡಲಾಗಿದೆ. ಇದು ಇತಿಹಾಸಕ್ಕೆ ಕೊಡಬೇಕಾದ ಗೌರವ ಎಂಬುದು ಅನೇಕರ ಅಭಿಮತ.
ಟಿಪ್ಪು ಸುಲ್ತಾನ್ ಕ್ರೂರಿಯೇ ಇದ್ದಿರಲಿ, ಆದರೆ, 18ನೇ ಶತಮಾನದಲ್ಲಿದ್ದ ಅವರ ಆಡಳಿತವು ಬಹಳ ಆದರ್ಶಪ್ರಾಯವಾಗಿತ್ತು ಎಂದು ಅನೇಕ ಇತಿಹಾಸಜ್ಞರು ಹೇಳುತ್ತಾರೆ. ಆ ಕಾಲದಲ್ಲಿ ಭಾರತದಾದ್ಯಂತ ಪ್ರಾಬಲ್ಯ ಸಾಧಿಸುತ್ತಿದ್ದ ಬ್ರಿಟಿಷರಿಗೆ ಏಕೈಕ ಅಡ್ಡಿಯಾಗಿದ್ದು ಟಿಪ್ಪು ಸುಲ್ತಾನ್ ಮಾತ್ರವೇ. ಸಮರ್ಥ ಆಡಳಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಟಿಪ್ಪು ಸುಲ್ತಾನ್ ಬಲಿಷ್ಠ ರಾಜನಾಗಿದ್ದ, ಪ್ರಗತಿಪರ ಆಡಳಿತಗಾರನಾಗಿದ್ದ. ಟಿಪ್ಪು ಮತಾಂತರ ಮಾಡಿಸುತ್ತಿದ್ದುದು ನಿಜವೇ ಆದರೂ ಆತ ಮತಾಂಧನಾಗಿರಲಿಲ್ಲ ಎಂದು ಬಹಳಷ್ಟು ಇತಿಹಾಸಕಾರರು ಹೇಳುತ್ತಾರೆ.
ಬ್ಯಾಂಕಿಂಗ್ ವ್ಯವಸ್ಥೆ:
ಟಿಪ್ಪು ಸುಲ್ತಾನ್ ಭಾರತದಲ್ಲಿ ಆಗಲೇ ಬ್ಯಾಂಕಿಂಗ್ ವ್ಯವಸ್ಥೆ ಚಾಲ್ತಿಗೆ ತಂದಿದ್ದ. ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳು ಮೈಸೂರು ಸಂಸ್ಥಾನಕ್ಕೆ ಸಿಗಬೇಕೆಂಬುದು ಟಿಪ್ಪುವಿನ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಬೇಕಾದ ಹಣಕಾಸು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಸಲುವಾಗಿ ಬ್ಯಾಂಕ್ ಮಾದರಿಯಲ್ಲಿ ಸಾರ್ಜನಿಕರಿಂದ ಹಣದ ಠೇವಣಿಗಳನ್ನು ಪಡೆಯುತ್ತಿದ್ದ. ಜನರು ಇಡುವ ಠೇವಣಿಗಳಿಗೆ ವಾರ್ಷಿಕವಾಗಿ ನಿಗದಿತ ಬಡ್ಡಿಯನ್ನೂ ಕೊಡಲಾಗುತ್ತಿತ್ತು.
ಕ್ಯಾಷ್'ಲೆಸ್ ವ್ಯವಸ್ಥೆ:
ಮೈಸೂರಿನ ಉತ್ಪನ್ನಗಳನ್ನು ದೇಶದೇಶಗಳಲ್ಲಿ ಮಾರಾಟ ಮಾಡಲು ಟಿಪ್ಪು ಸುಲ್ತಾನ್ ಸಾಕಷ್ಟು ವ್ಯವಸ್ಥೆ ಮಾಡಿದ್ದ. ಕ್ಯಾಷ್'ಲೆಸ್ ಅಥವಾ ಬಾರ್ಟರ್ ಪದ್ಧತಿಯನ್ನೇ ಹೆಚ್ಚಾಗಿ ಬಳಸುತ್ತಿದ್ದ. ಬ್ರಿಟಿಷರು ಭಾರತದ, ಅದರಲ್ಲೂ ಮೈಸೂರಿನ ಸಂಪತ್ತನ್ನು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಟಿಪ್ಪು ಈ ತಂತ್ರ ರೂಪಿಸಿದ್ದ. ಅಂದರೆ, ಮೈಸೂರಿನಿಂದ ನಡೆಯುತ್ತಿದ್ದ ವಹಿವಾಟಿನಲ್ಲಿ ಯಾವ ಭಾಗವೂ ಬ್ರಿಟಿಷರಿಗೆ ತಲುಪದಂತೆ ಟಿಪ್ಪು ಎಚ್ಚರ ವಹಿಸಿದ್ದ. ಕ್ಯಾಷ್'ಲೆಸ್ ವಹಿವಾಟಿಗೆ ಟಿಪ್ಪು ಸಾಂಪ್ರದಾಯಿಕ ಬಾರ್ಟರ್ ಪದ್ಧತಿಯನ್ನೇ ಬಳಕೆ ಮಾಡುತ್ತಿದ್ದ. ಉದಾಹರಣೆಗೆ, ಮೆಣಸು, ಚಂದನ, ಹತ್ತಿ, ದಂತ ಇತ್ಯಾದಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಫ್ರಾನ್ಸ್, ಇದಕ್ಕೆ ಪ್ರತಿಯಾಗಿ ಮದ್ದು ಗುಂಡುಗಳು, ರೇಷ್ಮೆ ಮೊದಲಾದವನ್ನು ಮೈಸೂರು ಸಂಸ್ಥಾನಕ್ಕೆ ಕೊಡುತ್ತಿತ್ತು.
ಕೈಗಾರಿಕೆಗಳಿಗೆ ಪುಷ್ಟಿ:
ಯೂರೋಪ್'ನಲ್ಲಿ ನಡೆಯುತ್ತಿದ್ದ ಕೈಗಾರಿಕಾ ಕ್ರಾಂತಿಗಳಿಂದ ಸ್ಫೂರ್ತಿ ಪಡೆದಿದ್ದ ಟಿಪ್ಪು, ಮೈಸೂರು ಸಾಮ್ರಾಜ್ಯದಲ್ಲಿ ಸಕ್ಕರೆ, ಉಪ್ಪು, ಕಬ್ಬಿಣ, ತಂಬಾಕು, ಚಂದನ, ಬೆಳ್ಳಿ ಗಣಿಗಾರಿಕೆ, ಚಿನ್ನ ಗಣಿಗಾರಿಕೆ, ರತ್ಯವೈಡೂರ್ಯ ಗಣಿಗಾರಿಕೆ ಮೊದಲಾದ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತುನೀಡಿದ್ದ. ಇದು ಟಿಪ್ಪುವಿನ ಆರ್ಥಿಕ ಜಾಣ್ಮೆಗೆ ನಿದರ್ಶನವಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ:
ಟಿಪ್ಪು ಸುಲ್ತಾನ್ ತಂತ್ರಜ್ಞಾನ ಪ್ರೇಮಿಯಾಗಿದ್ದ. ವಿಶ್ವಾದ್ಯಂತ ನಡೆಯುತ್ತಿದ್ದ ಬೆಳವಣಿಗೆಗಳನ್ನು ಬಹಳ ಕುತೂಹಲದಿಂದ ವೀಕ್ಷಿಸುತ್ತಿದ್ದ ಟಿಪ್ಪು ಸುಲ್ತಾನ್, ಅತ್ಯಾಧುನಿಕ ತಂತ್ರಜ್ಞಾನವನ್ನು ಮೈಸೂರಿಗೆ ಶತಾಯಗತಾಯ ತರಲು ಯತ್ನಿಸುತ್ತಿದ್ದ. ಯೂರೋಪ್'ನ ವಿವಿಧ ದೇಶದ ರಾಯಭಾರಿಗಳು ಮೈಸೂರಿಗೆ ಬರುತ್ತಿದ್ದರೆ, ಜೊತೆಯಲ್ಲಿ ಒಡವೆ, ವೈಡೂರ್ಯಗಳ ಬದಲು ಆ ದೇಶದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ತರುವಂತೆ ಕೇಳಿಕೊಳ್ಳುತ್ತಿದ್ದ. ಅಂತಹ ತಂತ್ರಜ್ಞಾನವನ್ನು ಟಿಪ್ಪು ಇನ್ನಷ್ಟು ಅಭಿವೃದ್ಧಿಪಡಿಸಿ ಹೊಸ ಉತ್ಪನ್ನಕ್ಕೆ ಯತ್ನಿಸುತ್ತಿದ್ದ. ಇಂತಹ ಒಂದು ಪ್ರಯತ್ನವೇ ಕ್ಷಿಪಣಿ. ಆ ಕಾಲದಲ್ಲಿ ಚೀನೀಯರು ಪಟಾಕಿ ರೀತಿಯ ಮಿಸೈಲ್ ತಯಾರಿಸುತ್ತಿದ್ದರು. ಆದರೆ, ಟಿಪ್ಪು ಸುಲ್ತಾನ್ ಉಕ್ಕು, ಕಬ್ಬಿಣಗಳನ್ನು ಕ್ಷಿಪಣಿಗೆ ಪ್ರಯೋಗ ಮಾಡಿದ. ಟಿಪ್ಪುವಿನ ರಾಕೆಟ್ಟುಗಳು ಬ್ರಿಟಿಷರಿಗೆ ಭಾರತದಲ್ಲಿ ಮೊತ್ತಮೊದಲ ಸೋಲುಣಿಸಲು ಕಾರಣವಾಯಿತು. ಟಿಪ್ಪುವಿನ ಈ ಕ್ಷಿಪಣಿಯಿಂದ ಐರೋಪ್ಯನ್ನರು ಸ್ಫೂರ್ತಿ ಪಡೆದು ಇನ್ನಷ್ಟು ಅಭಿವೃದ್ಧಿಪಡಿಸಿದರು. ಆಧುನಿಕ ಕ್ಷಿಪಣಿಗೆ ಟಿಪ್ಪುವಿನ ಕ್ಷಿಪಣಿಯೇ ಕಾರಣವಾಯಿತು. ದುರದೃಷ್ಟಕ್ಕೆ ಟಿಪ್ಪುವಿನ ಕ್ಷಿಪಣಿ ಅಥವಾ ರಾಕೆಟ್ ಯಾವುದೂ ಭಾರತದಲ್ಲಿಲ್ಲ. ಇಂಗ್ಲೆಂಡ್''ನವರು ಅವೆಲ್ಲವನ್ನೂ ಸಂಗ್ರಹಿಸಿಟ್ಟುಕೊಂಡಿದ್ದಾರೆ. ತಮ್ಮ ವಿರುದ್ಧ ಹೋರಾಡಿದ ಟಿಪ್ಪುವಿನ ಅನೇಕ ಅಮೂಲ್ಯ ವಸ್ತುಗಳನ್ನು ಇಂಗ್ಲೆಂಡ್ ಜೋಪಾನ ಮಾಡಿಟ್ಟುಕೊಂಡಿರುವುದು ಗಮನಾರ್ಹ.
ಟೆಕ್ನಾಲಜಿ ಪಾರ್ಕ್:
ಭಾರತದಲ್ಲಿ ಈಗ ತಂತ್ರಜ್ಞಾನ ಪಾರ್ಕ್'ಗಳನ್ನು ಬೆಳೆಸುವ ಯೋಜನೆಗಳು ರೂಪಿತವಾಗಿವೆ. ಆದರೆ, 200 ವರ್ಷಗಳಿಗೂ ಮುಂಚೆಯೇ ಟಿಪ್ಪು ಸುಲ್ತಾನ್ ಈ ಕೆಲಸ ಮಾಡಿದ್ದ. ಬೆಂಗಳೂರು, ಚಿತ್ರದುರ್ಗ, ಶ್ರೀರಂಗಪಟ್ಟಣ ಮತ್ತು ಬಿದನೂರು ಹೀಗೆ ನಾಲ್ಕು ಸ್ಥಳಗಳನ್ನು ಆಧುನಿಕ ತಂತ್ರಜ್ಞಾನ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಿದ. ಇವುಗಳನ್ನು ತಾರಾಮಂಡಲಪೇಟೆ ಎಂದು ಕರೆದ. ಇಲ್ಲಿ, ರಾಕೆಟ್'ಗೆ ಬೇಕಾದ ಕಬ್ಬಿಣ, ಉಕ್ಕು ಮೊದಲಾದ ವಸ್ತುಗಳನ್ನು ಭಾರತೀಯ ಸಾಂಪ್ರದಾಯಿಕ ಪದ್ಧತಿಯಲ್ಲೇ ತಯಾರಿಸಲು ಅನುವು ಮಾಡಿಕೊಟ್ಟಿದ್ದ.
ಬೆಂಗಳೂರು, ಚನ್ನಪಟ್ಟಣ, ರಾಮನಗರ, ಶ್ರೀರಂಗಪಟ್ಟಣ ಮತ್ತು ಮಂಡ್ಯ ನಗರಗಳಲ್ಲಿ ಟಿಪ್ಪು ಸುಲ್ತಾನ್ ಕೈಗಾರಿಕಾ ವಲಯಗಳನ್ನು ಕಟ್ಟಿದ. ಬೆಂಗಳೂರಿನಲ್ಲಿ ನೇರಳೆ, ರೇಷ್ಮೆ ಉತ್ಪಾದನೆಕ್ಕೆ ಉತ್ತೇಜನ ಕೊಟ್ಟ. ನಾಣ್ಯ ಮತ್ತು ಕರೆನ್ಸಿಗಳ ತಯಾರಿಕೆಯೂ ಇಲ್ಲೇ ಆಯಿತು. ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಮರಕೆತ್ತನೆ ಕಲೆಗಳಿಗೆ ಪ್ರೋತ್ಸಾಹ ಕೊಟ್ಟ. ರಾಮನಗರದಲ್ಲಿ ಬೃಹತ್ ರೇಷ್ಮೆ ಉದ್ಯಮ ರೂಪಿಸಿದ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ. ಶ್ರೀರಂಗಪಟ್ಟಣವು ರಾಕೆಟ್, ಮದ್ದು ಗುಂಡು, ಆಯುಧ ಸಲಕರಣೆಗಳ ತಯಾರಿಕೆಯ ನೆಲೆಯಾಯಿತು. ಹಾಗೂ ಇಲ್ಲಿ ಚಂದನ ಕೈಗಾರಿಕೆಗಳೂ ಪ್ರಾರಂಭಗೊಂಡವು.
ತನ್ನ ಸಾಮ್ರಾಜ್ಯದ ವಿವಿಧ ಕಡೆ ತಂತ್ರಜ್ಞಾನ ಪಾರ್ಕ್ ಹಾಗೂ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲು ಟಿಪ್ಪುವಿಗೆ ಬಲವಾದ ಹಾಗೂ ಜಾಣ್ಮೆಯ ಕಾರಣಗಳಿದ್ದವು. ನಗರಗಳ ಅಭಿವೃದ್ಧಿ ಒಂದು ಕಾರಣವಾದರೆ, ಶತ್ರುಗಳು ಒಂದು ನಗರದ ಮೇಲೆ ದಾಳಿ ಮಾಡಿ ಜಯಿಸಿದರೂ, ಬೇರೆ ನಗರಗಳಲ್ಲಿ ಬ್ಯಾಕಪ್ ರೀತಿಯಾಗಿ ಕೈಗಾರಿಕೆಗಳು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಎಂಬುದು ಟಿಪ್ಪುವಿನ ಇನ್ನೊಂದು ಲೆಕ್ಕಾಚಾರ.
ರಿಪಬ್ಲಿಕ್ ಆಫ್ ಶ್ರೀರಂಗಪಟ್ಟಣ:
ಟಿಪ್ಪು ಸುಲ್ತಾನ್ ಫ್ರಾನ್ಸ್ ದೇಶದಲ್ಲಿ ನಡೆಯುತ್ತಿದ್ದ ಕ್ರಾಂತಿಯಿಂದ ಅತೀವ ಸ್ಫೂರ್ತಿ ಪಡೆದಿದ್ದ. ಬ್ರಿಟೀಷರ ಕಡುವೈರಿಯಾಗಿದ್ದ ಫ್ರೆಂಚರೊಂದಿಗೆ ಟಿಪು ಸುಲ್ತಾನ್ ಸಹಜವಾಗಿಯೇ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ. ಫ್ರಾನ್ಸ್'ನಲ್ಲಿ ನಡೆಯುತ್ತಿದ್ದ ಕ್ರಾಂತಿಯ ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಗಣತಂತ್ರ ರೂಪಿಸುವ ಹೆಬ್ಬಯಕೆ ಹೊಂದಿದ್ದ.
ಜಾತ್ಯತೀತತೆ:
ಟಿಪ್ಪು ಸುಲ್ತಾನ್ ಅನ್ಯಧರ್ಮೀಯರನ್ನು ಇಸ್ಲಾಮ್'ಗೆ ಮತಾಂತರ ಮಾಡಿಸುತ್ತಿದ್ದುದು ನಿಜವೇ ಆದರೂ ಆತ ಮತಾಂಧನಾಗಿರಲಿಲ್ಲವೆಂದು ಇತಿಹಾಸಕಾರರು ಹೇಳುತ್ತಾರೆ. ವಿವಿಧ ಇಲಾಖೆಗಳಲ್ಲಿ ಮುಸ್ಲಿಮೇತರರು ಪ್ರಮಾಣ ಸ್ವೀಕರಿಸುವಾಗ ಅವರವರ ಧರ್ಮಗಳ ಪ್ರಕಾರವೇ ತೆಗೆದುಕೊಳ್ಳುವ ಅವಕಾಶ ಕೊಟ್ಟಿದ್ದ. ಕೋರ್ಟ್ ಪ್ರವೇಶಿಸುವ ಮುಸ್ಲಿಮೇತರ ಅಧಿಕಾರಿಗಳಿಗೆ ಅವರವರ ಪದ್ಧತಿ ಪ್ರಕಾರವೇ ಆಹಾರ ವ್ಯವಸ್ಥೆ ಮಾಡಲಾಗುತ್ತಿತ್ತು.
(ಮಾಹಿತಿ: ಟೈಮ್ಸ್ ಆಫ್ ಇಂಡಿಯಾ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.