ಪುಲ್ವಾಮಾಗಿಂತ ದೊಡ್ಡ ದಾಳಿಗೆ ಜೈಶ್ ಸಂಘಟನೆ ಸಂಚು?

By Web DeskFirst Published Feb 22, 2019, 7:51 AM IST
Highlights

ಕಾಶ್ಮೀರ ಅಥವಾ ಭಾರತದ ಬೇರೆಡೆ ವಿಧ್ವಂಸಕ ಕೃತ್ಯಕ್ಕೆ ಜೈಷ್‌ ಉಗ್ರರ ಸಿದ್ಧತೆ  | ಪಾಕ್‌ ಹಾಗೂ ಕಾಶ್ಮೀರಿ ಉಗ್ರರ ಸಂಭಾಷಣೆ ಭೇದಿಸಿದಾಗ ಸಂಚು ಬಯಲು | ಪಾಕ್‌ನ ಜೈಷ್‌ ಉಗ್ರ ನಾಯಕರು, ಕಾಶ್ಮೀರಿ ಉಗ್ರರ ನಡುವೆ ಫೆ.16, 17ಕ್ಕೆ ಸಂಭಾಷಣೆ

ನವದೆಹಲಿ/ಶ್ರೀನಗರ (ಫೆ. 22):  ಸಿಆರ್‌ಪಿಎಫ್‌ನ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಯ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಜೈಷ್‌-ಎ-ಮೊಹಮ್ಮದ್‌ ಉಗ್ರಗಾಮಿ ಸಂಘಟನೆ, ಪುಲ್ವಾಮಾಕ್ಕಿಂತ ಭೀಕರ ದಾಳಿಗೆ ಸಿದ್ಧತೆ ನಡೆಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಹಫೀಜ್‌ ಸಯೀದ್ ಸಂಘಟನೆಗೆ ಪಾಕ್‌ ನಿಷೇಧ

ಪಾಕಿಸ್ತಾನದಲ್ಲಿ ನೆಲೆಯೂರಿರುವ ಜೈಷ್‌ ಸಂಘಟನೆಯ ನಾಯಕರು ಹಾಗೂ ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಭಯೋತ್ಪಾದಕರ ನಡುವಣ ಸಂಭಾಷಣೆಯನ್ನು ಫೆ.16 ಹಾಗೂ 17ರಂದು ಭದ್ರತಾ ಪಡೆಗಳು ಭೇದಿಸಿದಾಗ ಈ ಸ್ಫೋಟಕ ಮಾಹಿತಿ ಪತ್ತೆಯಾಗಿದೆ. ಭಾರತೀಯ ಭದ್ರತಾ ಪಡೆಗಳಿಗೆ ಘನಘೋರ ಹಾನಿ ಉಂಟು ಮಾಡಲು ಮತ್ತೊಂದು ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಈ ಸಂಭಾಷಣೆ ವೇಳೆ ಚರ್ಚೆ ನಡೆದಿದೆ. ಈ ದಾಳಿ ಜಮ್ಮು-ಕಾಶ್ಮೀರದಲ್ಲಿ ಬೇಕಾದರೂ ನಡೆಯಬಹುದು ಅಥವಾ ಅದರಿಂದ ಹೊರಗೆ ಬೇಕಾದರೂ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಬರಲ್ಲ ಪಾಕಿಸ್ತಾನ ಶೂಟರ್ಸ್!

ಮೂವರು ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಜೈಷ್‌ ಸಂಘಟನೆಯ 21 ಉಗ್ರರು ಕಳೆದ ಡಿಸೆಂಬರ್‌ನಲ್ಲಿ ಕಾಶ್ಮೀರಕ್ಕೆ ನುಸುಳಿದ್ದರು. ಅವರು ಇನ್ನು ಸಕ್ರಿಯರಾಗಿ ದಾಳಿಗೆ ಇಳಿಯಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಯುವಕರಿಗೆ ವಿಡಿಯೋ ಗಾಳ:

ಇದೇ ವೇಳೆ, ಪುಲ್ವಾಮಾ ಆತ್ಮಾಹುತಿ ಬಾಂಬ್‌ ದಾಳಿಗೆ ಹೇಗೆ ಯೋಜನೆ ರೂಪಿಸಲಾಯಿತು ಎಂಬುದರ ಕುರಿತು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಕಾಶ್ಮೀರದಲ್ಲಿನ ಯುವಕರನ್ನು ತನ್ನ ಸಂಘಟನೆಯತ್ತ ಸೆಳೆಯಲು ಮತ್ತೊಂದು ಯೋಜನೆಯನ್ನು ಕೂಡ ಜೈಷ್‌ ಹಾಕಿಕೊಂಡಿರುವುದು ಭದ್ರತಾ ಪಡೆಗಳ ಕದ್ದಾಲಿಕೆ ವೇಳೆ ಗೊತ್ತಾಗಿದೆ.

ಫೆ.14ರ ಪುಲ್ವಾಮಾ ದಾಳಿ ನಡೆದ ಬೆನ್ನಲ್ಲೇ ದಾಳಿಕೋರ ಉಗ್ರ ಅದಿಲ್‌ ದಾರ್‌ನ ವಿಡಿಯೋ ಬಿಡುಗಡೆ ಮಾಡುವ ಮೂಲಕ ಆ ಸ್ಫೋಟ ನಡೆಸಿದ್ದು ತಾನೇ ಎಂದು ಜೈಷ್‌ ಸಂಘಟನೆ ಘೋಷಿಸಿತ್ತು. ಇನ್ನು ಮುಂದೆ ದಾರ್‌ನನ್ನು ವೈಭವೀಕರಿಸುವ ವಿಡಿಯೋಗಳನ್ನು ಬಿಡುಗಡೆ ಮಾಡಿ, ಕಾಶ್ಮೀರಿ ಯುವಕರ ಮನಗೆಲ್ಲಲು ಯತ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ತಿಂಗಳಿನಿಂದ ಜೈಷ್‌ ಸಂಘಟನೆ ಕಾಶ್ಮೀರದಲ್ಲಿ 50ರಿಂದ 60 ಯುವಕರನ್ನು ತನ್ನ ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

click me!