ನಾಳೆ 55 ಲಕ್ಷ ರೈತರ ಖಾತೆಗೆ ಕೇಂದ್ರದಿಂದ 2000 ರೂ ನಗದು

By Web DeskFirst Published Feb 23, 2019, 9:12 AM IST
Highlights

ಪ್ರಧಾನಿ ಕಿಸಾನ್‌’ ಯೋಜನೆಗೆ ಮೋದಿ ಚಾಲನೆ | ಮೌಸ್‌ ಬಟನ್‌ ಕ್ಲಿಕ್ಕಿಸುತ್ತಿದ್ದಂತೆ ಹಣ ಜಮೆ | ಮಾಹಿತಿ ಕೊಡದ ಕಾರಣ ಕರ್ನಾಟಕ ರೈತರಿಗೆ ಸದ್ಯ ನಯಾಪೈಸೆ ಸಿಗದು |  ಲೋಕಸಭೆ ಚುನಾವಣೆಗೂ ಮುನ್ನ ಮಹತ್ವಾಕಾಂಕ್ಷಿ ಯೋಜನೆ ಜಾರಿ

ನವದೆಹಲಿ (ಫೆ.23): ಸಣ್ಣ ಹಾಗೂ ಅತಿಸಣ್ಣ ರೈತರ ಬ್ಯಾಂಕ್‌ ಖಾತೆಗೆ 3 ಕಂತುಗಳಲ್ಲಿ ಪ್ರತಿ ವರ್ಷ 6 ಸಾವಿರ ರು. ನಗದು ಜಮೆ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ (ಪ್ರಧಾನಿ-ಕಿಸಾನ್‌) ಯೋಜನೆಗೆ ಭಾನುವಾರ ಚಾಲನೆ ಸಿಗಲಿದೆ.

ಉತ್ತರಪ್ರದೇಶದ ಗೋರಕ್‌ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌಸ್‌ ಬಟನ್‌ ಕ್ಲಿಕ್ಕಿಸುತ್ತಿದ್ದಂತೆ ಸುಮಾರು 55 ಲಕ್ಷ ರೈತರ ಖಾತೆಗೆ 2 ಸಾವಿರ ರು.ನ ಮೊದಲ ಕಂತು ಜಮೆಯಾಗಲಿದೆ.

ದೇಶದ ಇತಿಹಾಸದಲ್ಲೇ ರೈತರಿಗೆ ನೇರ ನಗದು ವರ್ಗ ಮಾಡುತ್ತಿರುವ ಮೊದಲ ಯೋಜನೆ ಇದಾಗಿದೆ. ಆದರೆ ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ವೆಬ್‌ಸೈಟ್‌ ಇದೀಗ ಅಪ್‌ಲೋಡ್‌ ಮಾಡುತ್ತಿರುವ ಕಾರಣ ಕರ್ನಾಟಕದ ರೈತರಿಗೆ ಈ ಯೋಜನೆಯ ಲಾಭ ಭಾನುವಾರವೇ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ಈವರೆಗೆ ವಿವಿಧ ರಾಜ್ಯಗಳು 2 ಕೋಟಿ ರೈತರ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಒದಗಿಸಿವೆ. ಇದರಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳು ಮುಂಚೂಣಿಯಲ್ಲಿವೆ. ಪ್ರಧಾನಿ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಹಣ ವರ್ಗಾವಣೆ ಪ್ರಕ್ರಿಯೆ ಮುಂದುವರಿಯಲಿದೆ. ರಾಜ್ಯ ಸರ್ಕಾರಗಳು ಕೇಂದ್ರೀಕೃತ ವೆಬ್‌ಸೈಟ್‌ಗೆ ಮಾಹಿತಿ ಒದಗಿಸಿದ 48 ತಾಸಿನಲ್ಲಿ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.

ಈ ಕಾರ್ಯಕ್ರಮವನ್ನು ದೇಶದ ಎಲ್ಲ ಜಿಲ್ಲೆಗಳ ಪ್ರತಿ ಬ್ಲಾಕ್‌ನಲ್ಲೂ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ ಸಿಂಗ್‌ ಮಾಹಿತಿ ನೀಡಿದ್ದಾರೆ.

ಮಾ.31ರೊಳಗೆ ಮೊದಲ ಕಂತಿನಲ್ಲಿ 2 ಸಾವಿರ ರು. ನಗದು ವರ್ಗ ಮಾಡಲು ಕೇಂದ್ರ ಸರ್ಕಾರ 20 ಸಾವಿರ ರು. ಮೀಸಲಿಟ್ಟಿದೆ. ಏ.1ರಿಂದ ಆರಂಭವಾಗುವ ಆರ್ಥಿಕ ವರ್ಷಕ್ಕಾಗಿ 75 ಸಾವಿರ ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಿದೆ. ಲೋಕಸಭೆ ಚುನಾವಣೆ ನಡೆಯುವುದರೊಳಗಾಗಿ 2ನೇ ಕಂತಿನ ಹಣವನ್ನೂ ಜಮೆ ಮಾಡುವ ಉದ್ದೇಶವನ್ನು ಹೊಂದಿದೆ.
 

click me!