
ಸ್ಯಾನ್ ಫ್ರಾನ್ಸಿಸ್ಕೋ(ಮೇ 02): ಹೆಚ್-1ಬಿ ವೀಸಾ ವಿಚಾರದಲ್ಲಿ ಅಮೆರಿಕ ಬಿಗಿ ನಿಲುವು ತೋರುತ್ತಿರುವಂತೆಯೇ ಇನ್ಫೋಸಿಸ್ ಸಂಸ್ಥೆಯಲ್ಲಿ ಭಾರತೀಯರ ಸಂಖ್ಯೆ ಕ್ಷೀಣಿಸುವ ಸಾಧ್ಯತೆ ಇದೆ. ನೇಮಕಾತಿಯಲ್ಲಿ ಬಹುತೇಕ ಭಾರತೀಯರಿಗೆ ಆದ್ಯತೆ ಕೊಡುತ್ತಿದ್ದ ಇನ್ಫೋಸಿಸ್ ಇನ್ಮುಂದೆ ಅಮೆರಿಕನ್ನರಿಗೆ ಮಣೆ ಹಾಕಲು ನಿರ್ಧರಿಸಿದೆ. ಮುಂದಿನ 2 ವರ್ಷಗಳಲ್ಲಿ 10 ಸಾವಿರ ಅಮೆರಿಕನ್ನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಇನ್ಫೋಸಿಸ್ ಯೋಜಿಸಿದೆ. ಅಷ್ಟೇ ಅಲ್ಲ, ಅಮೆರಿಕದಲ್ಲಿ ನಾಲ್ಕು ಟೆಕ್ನಾಲಜಿ ಅಂಡ್ ಇನೋವೇಶನ್ ಹಬ್'ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಆ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಷಿನ್ ಲರ್ನಿಂಗ್ ಇತ್ಯಾದಿ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತನ್ನ ಬಲ ವೃದ್ಧಿಸಿಕೊಳ್ಳುವ ಗುರಿ ಇನ್ಫೋಸಿಸ್'ನದ್ದು.
ಇಂಥ ಮೊದಲ ಕೇಂದ್ರವನ್ನು ಇದೇ ಆಗಸ್ಟ್'ನಲ್ಲಿ ಇಂಡಿಯಾನಾ ರಾಜ್ಯದಲ್ಲಿ ಸ್ಥಾಪಿಸಲಿದೆ. ಇಲ್ಲಿ 2021ರಷ್ಟರಲ್ಲಿ 2 ಸಾವಿರ ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳುವ ಗುರಿ ಇದೆ. ಇತರ ಮೂರು ಕೇಂದ್ರಗಳು ಎಲ್ಲೆಲ್ಲಿ ಸ್ಥಾಪಿಸಲಾಗುವುದು ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.
ಇನ್ಫೋಸಿಸ್ ಸಂಸ್ಥೆ 2016-17ರ ವರ್ಷದಲ್ಲಿ 10.2 ಬಿಲಿಯನ್ ಡಾಲರ್(ಸುಮಾರು 65 ಸಾವಿರ ಕೋಟಿ ರೂ.) ಇದೆ. ಇದರಲ್ಲಿ ಶೇ.60 ಆದಾಯವು ಉತ್ತರ ಅಮೆರಿಕದ ಮಾರುಕಟ್ಟೆಯಿಂದಲೇ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ತನ್ನ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕನ್ನರನ್ನ ನೇಮಿಸಿಕೊಳ್ಳಲು ಇನ್ಫೋಸಿಸ್ ನಿರ್ಧರಿಸಿದೆ ಎನ್ನಲಾಗಿದೆ.
ಏನಿದು ಹೆಚ್-1ಬಿ ವೀಸಾ?
ಅಮೆರಿಕಕ್ಕೆ ಹೋಗಲು ಅನುಮತಿ ಸಿಗುವ ಒಂದು ಬಗೆಯ ವರ್ಕ್ ವೀಸಾ. ಅಂದರೆ ಕೆಲಸದ ಮೇಲೆ ಅಮೆರಿಕಕ್ಕೆ ಹೋಗುವ ಅವಕಾಶ ಈ ವೀಸಾದಿಂದ ಸಿಗುತ್ತದೆ. ಆದರೆ, ಹೆಚ್-1ಬಿ ವೀಸಾವನ್ನು ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ಕೆಲವು ಭಾರತೀಯ ಕಂಪನಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಅಮೆರಿಕನ್ನರಿಗೆ ಸಿಗಬೇಕಾದ ಕೆಲಸಗಳು ಬೇರೆಯವರ ಪಾಲಾಗುತ್ತಿದೆ. ಇದು ಆಗಕೂಡದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟಪ್ಪಣೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್-1ಬಿ ವೀಸಾದ ಗೊಡವೆಯೇ ಬೇಡವೆಂದು ಇನ್ಫೋಸಿಸ್, ಅಮೆರಿಕದಲ್ಲಿರುವ ತನ್ನ ಘಟಕಗಳಲ್ಲಿ ಸ್ಥಳೀಯರನ್ನೇ ನೇಮಿಸಿಕೊಳ್ಳಲು ನಿರ್ಧರಿಸಿರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.